ಮಂಗಳೂರು : ಇತ್ತೀಚೆಗೆ ಸಾಂಸ್ಕೃತಿಕ ನಗರಿ ಮೈಸೂರು ಮಾದಕ ವ್ಯಸನ ಮತ್ತು ಡ್ರಗ್ಸ್ ಜಾಲದ ಕೇಂದ್ರವಾಗಿ ಮಾರ್ಪಟ್ಟಿರುವುದು ತೀವ್ರ ಆತಂಕಕಾರಿಯಾಗಿದೆ. ಮಹಾರಾಷ್ಟ್ರ ಪೊಲೀಸರು ಮೈಸೂರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ತಯಾರಿಕಾ ಘಟಕವನ್ನು ಪತ್ತೆ ಹಚ್ಚಿರುವುದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಾನೂನು ಸುವ್ಯವಸ್ಥೆ ಮತ್ತು ಗುಪ್ತಚರ ಇಲಾಖೆಯ ಕಾರ್ಯಕ್ಷಮತೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈ ವೈಫಲ್ಯವನ್ನು ಖಂಡಿಸಿ ಮತ್ತು ಮೈಸೂರು ಹಾಗೂ ಕರ್ನಾಟಕವನ್ನು ಮಾದಕವನ್ನು ಮುಕ್ತ ರಾಜ್ಯವನ್ನಾಗಿ ಮಾಡುವ ಉದ್ದೇಶದಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಅಗಸ್ಟ್ 12,ರಂದು ಬೃಹತ್ “ಮೈಸೂರು ಚಲೋ ಚಳುವಳಿಯನ್ನು ಹಮ್ಮಿಕೊಂಡಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಮಂಗಳೂರು ವಿಭಾಗದ ಸಂಚಾಲಕ ಸುವಿತ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮೈಸೂರಿನ ಹೊರವಲಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಫ್ಯಾಕ್ಟರಿ ಕಾರ್ಯನಿರ್ವಹಿಸುತ್ತಿದ್ದರೂ ಸ್ಥಳೀಯಾಡಳಿತ, ಪೊಲೀಸ್ ಇಲಾಖೆ ಮತ್ತು ಗುಪ್ತಚರ ಸಂಸ್ಥೆಗಳಿಗೆ ಅದರ ಬಗ್ಗೆ ಅರಿವಿಲ್ಲದಿರುವುದು ಅತ್ಯಂತ ಬೇಜವಾಬ್ದಾರಿಯ ಸಂಗತಿಯಾಗಿದೆ.ಇದು ನಮ್ಮ ಕಾನೂನು ಪಾಲನಾ ವ್ಯವಸ್ಥೆಯ ಅಂತರವನ್ನು ಮತ್ತು ವೈಫಲ್ಯವನ್ನು ಸ್ಪಷ್ಟವಾಗಿ ತೋರಿಸುತ್ತದೆ. ವಿದೇಶಿ ಮತ್ತು ಹೊರ ರಾಜ್ಯಗಳ ಮಾಫಿಯಾಗಳು ನಮ್ಮ ಸಾಂಸ್ಕೃತಿಕ ರಾಜಧಾನಿಯಲ್ಲಿ ಅಕ್ರಮವಾಗಿ ಡ್ರಗ್ಸ್ ಉತ್ಪಾದನೆ ಮತ್ತು ಮಾರಾಟ ಮಾಡುತ್ತಿದ್ದರೂ, ರಾಜ್ಯದ ಭದ್ರತಾ ಸಂಸ್ಥೆಗಳು ಕಣ್ಮುಟ್ಟಿ ಕುಳಿತಿದ್ದವು ಈ ಘಟನೆ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಸಮರ್ಥತೆಯನ್ನು ಸಂಶಯದಲ್ಲಿಟ್ಟಿದೆ ಎಂದರು.

ಮಾದಕ ವ್ಯಸನವು ಯುವಜನತೆ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ನಾಶಪಡಿಸುತ್ತಿದೆ. ಮಾದಕ ವಸ್ತುಗಳ ಸುಲಭ ಲಭ್ಯತೆಯು ಅನೇಕ ವಿದ್ಯಾರ್ಥಿಗಳನ್ನು ಈ ದುಶ್ಚಟಕ್ಕೆ ಬಲಿಪಶುಗಳನ್ನಾಗಿ ಮಾಡುತ್ತಿದೆ. ಇದರ ಪರಿಣಾಮವಾಗಿ, ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ ವಿದ್ಯಾರ್ಥಿನಿಯರು ಮತ್ತು ಯುವತಿಯರು ಕೂಡ ಮಾದಕ ವ್ಯಸನಿಗಳ ದಾಳಿಗೆ ಒಳಗಾಗುತ್ತಿದ್ದು ಅವರ ಸುರಕ್ಷತೆ ಅಪಾಯದಲ್ಲಿದೆ ಡ್ರಗ್ಸ್ ಮಾಫಿಯಾ ಇಡೀ ಸಮಾಜದ ಶಾಂತಿ,ನೆಮ್ಮದಿ ಮತ್ತು ಸಮಗ್ರತೆಯನ್ನು ಹಾಳುಮಾಡುತ್ತಿದೆ.ಈ ಜಾಲವು ಯುವಕರು ಮತ್ತು ಸಮಾಜವನ್ನು ಆರ್ಥಿಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ದುರ್ಬಲಗೊಳಿಸುತ್ತಿದೆ.

ಈ ಕಾರಣದಿಂದ ಅಗಸ್ಟ್ 12 ರಂದು ನಶಾಮುಕ್ತ ಕರ್ನಾಟಕಕ್ಕಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತ್ರತ್ವದಲ್ಲಿ ಮೈಸೂರು ಚಲೋ ಬ್ರಹತ್ ವಿದ್ಯಾರ್ಥಿ, ಜಾಗ್ರತಿ ರ್ಯಾಲಿ ನಡೆಯಲಿದೆ. ಈ ರ್ಯಾಲಿಯಲ್ಲಿ ಮಂಗಳೂರಿನಿಂದ ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಸುವಿತ್ ಶೆಟ್ಟಿ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಶ್ರೀಜಿತ್ ರೈ, ಶ್ರೀ ಲಕ್ಷ್ಮೀ ಶೆಟ್ಟಿ ಉಪಸ್ಥಿತರಿದ್ದರು.

