ಭಾರತವು ಸಿಂಧೂ ನದಿಗೆ ಅಣೆಕಟ್ಟು ನಿರ್ಮಾಣವನ್ನು ಮುಂದುವರಿಸಿದರೆ ಇಸ್ಲಾಮಾಬಾದ್ ತನ್ನ ನೀರಿನ ಹಕ್ಕುಗಳನ್ನು “ಯಾವುದೇ ಬೆಲೆ ತೆತ್ತಾದರೂ” ರಕ್ಷಿಸಿಕೊಳ್ಳುತ್ತದೆ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಸೈಯದ್ ಅಸಿಮ್ ಮುನೀರ್ ಅವರು ಹೇಳಿದ್ದಾರೆ.
ಮುನೀರ್ ಅವರು ಕಾಶ್ಮೀರವನ್ನು ಪಾಕಿಸ್ತಾನದ “ಕತ್ತಿನ ರಕ್ತನಾಳ” ಎಂದು ಬಣ್ಣಿಸುತ್ತಾ, ಅದು ಭಾರತದ ಆಂತರಿಕ ವಿಷಯವಲ್ಲ, ಆದರೆ ಬಗೆಹರಿಯದ ಅಂತರರಾಷ್ಟ್ರೀಯ ವಿಷಯವಾಗಿದೆ ಎಂದು ಹೇಳುವ ಮೂಲಕ ತಮ್ಮ ಭಾರತ ವಿರೋಧಿ ವಾಕ್ಚಾತುರ್ಯವನ್ನು ಪುನರಾವರ್ತಿಸಿದ್ದಾರೆ

ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ಭಾರತಕ್ಕೆ ಪರಮಾಣು ಬೆದರಿಕೆಗಳನ್ನು ಹಾಕಿದ್ದಾರೆ. ಭವಿಷ್ಯದಲ್ಲಿ ಭಾರತದೊಂದಿಗಿನ ಸಂಘರ್ಷದಲ್ಲಿ ಅಸ್ತಿತ್ವದ ಬಿಕ್ಕಟ್ಟು ಎದುರಾದರೆ, ವಿಶ್ವದ ಅರ್ಧದಷ್ಟು ಭಾಗವನ್ನು ನಾಶಪಡಿಸುವುದಾಗಿ ಅವರು ಹೇಳಿದ್ದಾರೆ. ಭಾರತ ಈ ಹೇಳಿಕೆಗಳನ್ನು “ಬೇಜವಾಬ್ದಾರಿ” ಎಂದು ಕರೆದಿದೆ ಮತ್ತು ರಾಷ್ಟ್ರೀಯ ಭದ್ರತೆಯನ್ನು ಕಾಪಾಡಲು ದೇಶವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದೆ. ಸಿಂಧೂ ನದಿಯ ಮೇಲಿನ ಭಾರತದ ಅಣೆಕಟ್ಟು ಯೋಜನೆಗಳನ್ನು ನಾಶಪಡಿಸುವುದಾಗಿ ಮುನೀರ್ ಬೆದರಿಕೆ ಹಾಕಿದ್ದಾರೆ

ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸಿದರೆ ತಮ್ಮ ದೇಶವು ಅಣೆಕಟ್ಟುಗಳನ್ನು ಕ್ಷಿಪಣಿಗಳಿಂದ ಗುರಿಯಾಗಿಸಿಕೊಳ್ಳಲಿದೆ ಎಂದು ಭಾರತಕ್ಕೆ ಬೆದರಿಕೆ ಹಾಕಿದ್ದಾರೆ .ಫ್ಲೋರಿಡಾದ ಟ್ಯಾಂಪಾದಲ್ಲಿ ನಡೆದ ಖಾಸಗಿ ಭೋಜನಕೂಟದಲ್ಲಿ ಮಾತನಾಡಿದ ಮುನೀರ್,”ಭಾರತ ಅಣೆಕಟ್ಟು ನಿರ್ಮಿಸುವವರೆಗೆ ನಾವು ಕಾಯುತ್ತೇವೆ, ಮತ್ತು ಅದು ಪೂರ್ಣಗೊಂಡ ನಂತರ ನಾವು ಅದನ್ನು 10 ಕ್ಷಿಪಣಿಗಳಿಂದ ನಾಶಪಡಿಸುತ್ತೇವೆ ಎಂದು ಹೇಳಿದ್ದಾರೆ..

