ಶ್ರೀನಗರ : 1990 ರಲ್ಲಿ ಉಗ್ರಗಾಮಿಗಳು 27 ವರ್ಷದ ಕಾಶ್ಮೀರಿ ಪಂಡಿತ್ ನರ್ಸ್ ಸರಳ ಭಟ್ ಅವರನ್ನು ಕೊಂದ ಪ್ರಕರಣದ ತನಿಖೆಗಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಘಟಕ, ರಾಜ್ಯ ತನಿಖಾ ಸಂಸ್ಥೆ (SIA), ಮಂಗಳವಾರ ಶ್ರೀನಗರದ ಎಂಟು ಸ್ಥಳಗಳಲ್ಲಿ ದಾಳಿ ನಡೆಸಿದೆ

ಇದರಲ್ಲಿ ಲಿಬರೇಶನ್ ಫ್ರಂಟ್ (ಜೆಕೆಎಲ್ಎಫ್)ನ ಮಾಜಿ ಸದಸ್ಯರ ನಿವಾಸಗಳು ಸೇರಿವೆ. ಜೆಕೆಎಲ್ಎಫ್ನ ಮಾಜಿ ನಾಯಕ ಪೀರ್ ನೂರುಲ್ ಹಕ್ (ಏರ್ ಮಾರ್ಷಲ್ ಎಂದೂ ಕರೆಯುತ್ತಾರೆ) ಅವರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ
27 ವರ್ಷದ ನರ್ಸ್ ಸರಳ ಭಟ್, ಸೌರಾದ ಶೇರ್-ಇ-ಕಾಶ್ಮೀರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (SKIMS) ಕೆಲಸ ಮಾಡುತ್ತಿದ್ದಾಗ, ಏಪ್ರಿಲ್18, 1990 ರಂದು ಹಬ್ಬಾ ಖಾತೂನ್ ಹಾಸ್ಟೆಲ್ನಿಂದ ಅವರನ್ನು ಅಪಹರಿಸಲಾಯಿತು. ಮರುದಿನ ಬೆಳಿಗ್ಗೆ ಮಲ್ಲಾಬಾಗ್ನ ಉಮರ್ ಕಾಲೋನಿಯಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ಆಕೆಯ ದೇಹವು ಪೊಲೀಸ್ ಮಾಹಿತಿದಾರೆ ಎಂದು ಬರೆದಿರುವ ಟಿಪ್ಪಣಿಯೊಂದಿಗೆ ಪತ್ತೆಯಾಗಿತ್ತು

ಪೊಲೀಸ್ ಮೂಲಗಳ ಪ್ರಕಾರ ಕಾಶ್ಮೀರಿ ಪಂಡಿತರು ಸರ್ಕಾರಿ ಉದ್ಯೋಗಗಳಿಗೆ ರಾಜೀನಾಮೆ ನೀಡಿ ಕಣಿವೆಯನ್ನು ತೊರೆಯಬೇಕೆಂಬ ತಮ್ಮ ಆದೇಶವನ್ನು ಧಿಕ್ಕರಿಸಿದ್ದಕ್ಕಾಗಿ ಮತ್ತು ಗುಂಪಿನ ಅಧಿಕಾರವನ್ನು ಬಹಿರಂಗವಾಗಿ ಪ್ರಶ್ನಿಸಿದ್ದಕ್ಕಾಗಿ ಭಟ್ ಅವರನ್ನು ಜೆಕೆಎಲ್ಎಫ್ ಉಗ್ರರು ಗುರಿಯಾಗಿಸಿಕೊಂಡಿದ್ದಾರೆ. ಅವರ ಮರಣದ ನಂತರವೂ, ಅವರ ಕುಟುಂಬಕ್ಕೆ ಬೆದರಿಕೆಗಳು ಎದುರಾಗಿದ್ದವು, ಸ್ಥಳೀಯರು ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸದಂತೆ ಎಚ್ಚರಿಸಿದ್ದರು.
ಆ ಸಮಯದಲ್ಲಿ ನಿಜೀನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು, ಆದರೆ ತನಿಖಾಧಿಕಾರಿಗಳಿಗೆ “ನಿಜವಾದ ಅಪರಾಧಿಗಳನ್ನು ಬಂಧಿಸಲು ಸಾಧ್ಯವಾಗಲಿಲ್ಲ” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಎಸ್ಐಎಯ ಹೊಸ ತನಿಖೆಯು ಮೂರು ದಶಕಗಳಿಗೂ ಹೆಚ್ಚು ಕಾಲದ ನಂತರ ಆಕೆಯ ಹತ್ಯೆಯ ಹಿಂದಿನವರನ್ನು ಗುರುತಿಸುವ ಗುರಿಯನ್ನು ಹೊಂದಿದೆ.

