ಕೊಲಂಬೊ: ಕೇರಳದ ಶಬರಿಮಲೆಯಲ್ಲಿರುವ ಅಯ್ಯಪ್ಪ ದೇಗುಲಕ್ಕೆ ವಾರ್ಷಿಕ ತೀರ್ಥಯಾತ್ರೆಗೆ ಮಾನ್ಯತೆ ನೀಡಲು ಶ್ರೀಲಂಕಾ ಸಚಿವ ಸಂಪುಟ ನಿರ್ಧರಿಸಿದೆ ಎಂದು ಮಂಗಳವಾರ ಬಿಡುಗಡೆಯಾದ ಸಚಿವ ಸಂಪುಟ ಹೇಳಿಕೆಯಲ್ಲಿ ತಿಳಿಸಲಾಗಿದೆ. ಶ್ರೀಲಂಕಾ ಸರ್ಕಾರ ಶಬರಿಮಲೆ ಧರ್ಮಶಾಸ್ತ್ರ ದೇವಾಲಯವನ್ನು ಮಾನ್ಯತೆ ಪಡೆದ ಯಾತ್ರಾ ಸ್ಥಳವೆಂದು ಗುರುತಿಸಿದೆ. ಪ್ರತಿ ವರ್ಷ 15,000 ಕ್ಕೂ ಹೆಚ್ಚು ಶ್ರೀಲಂಕಾದ ಪ್ರಜೆಗಳು ಶಬರಿಮಲೆಗೆ ಭೇಟಿ ನೀಡುತ್ತಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದ್ದು,”ಈ ತೀರ್ಥಯಾತ್ರೆಯನ್ನು ಸರ್ಕಾರವು ಗುರುತಿಸಿರುವ ಯಾತ್ರೆ ಎಂದು ಪರಿಗಣಿಸಲಾಗುತ್ತದೆ” ಎಂದು ಕೂಡ ಹೇಳಲಾಗಿದೆ.

ಶ್ರೀಲಂಕಾದ ಭಕ್ತರು ಬಹಳ ಸಮಯದಿಂದ ಭಾರತದ ಕೇರಳದಲ್ಲಿರುವ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಪ್ರತಿ ವರ್ಷ ನವೆಂಬರ್ 1 ರಿಂದ ಮುಂದಿನ ವರ್ಷದ ಜನವರಿ 31 ರವರೆಗೆ ಪೂಜೆ ಸಲ್ಲಿಸುತ್ತಿದ್ದಾರೆ” ಎಂದು ಹೇಳಿದೆ.

ಶಬರಿಮಲೆಯ ಅಯ್ಯಪ್ಪ ದೇಗುಲದಲ್ಲಿ ವಾರ್ಷಿಕ ಮಂಡಲ ಪೂಜೆ ಉತ್ಸವವು ನವೆಂಬರ್ ಮತ್ತು ಡಿಸೆಂಬರ್ ನಡುವೆ ನಡೆಯುತ್ತದೆ. ಜನವರಿಯಲ್ಲಿ ಕೊನೆಗೊಳ್ಳುವ ಮಕರವಿಳಕ್ಕು ತೀರ್ಥಯಾತ್ರೆಗಾಗಿ ದೇವಾಲಯ ತೆರೆಯುತ್ತದೆ. ತೀರ್ಥಯಾತ್ರೆಯ ಋತು ಮುಗಿದ ನಂತರ ದೇವಾಲಯ ಮುಚ್ಚುತ್ತದೆ.


