ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ,ಎ1 ಆರೋಪಿ ಪವಿತ್ರಾ ಗೌಡ ಹಾಗೂ ಇತರ ಐವರು ಆರೋಪಿಗಳಾದ ಲಕ್ಷ್ಮಣ್, ನಾಗರಾಜ್, ಪ್ರದೋಷ್, ಅನು ಕುಮಾರ್ ಮತ್ತು ಜಗದೀಶ್ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದೆ .ಇಂತಹ ಗಂಭೀರ ಪ್ರಕರಣದಲ್ಲಿ ಜಾಮೀನು ನೀಡುವುದರಿಂದ ಆರೋಪಿಗಳ ಪ್ರಭಾವಕ್ಕೆ ಒಳಗಾಗುವ ಅಪಾಯವಿದೆ ಎಂದು ಕೋರ್ಟ್ ಹೇಳಿದೆ.

ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ನೇತೃತ್ವದ ಪೀಠವು ಕರ್ನಾಟಕ ಹೈಕೋರ್ಟ್ನ ಹಿಂದಿನ ತೀರ್ಪನ್ನು ರದ್ದುಗೊಳಿಸಿ ಈ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ ದರ್ಶನ್ ಅವರನ್ನು ತಕ್ಷಣ ಬಂಧಿಸುವಂತೆ ಆದೇಶಿಸಿದೆ.

ರೇಣುಕಸ್ವಾಮಿ ಅವರ ತಂದೆ ಕಾಶಿನಾಥ ಶಿವನಗೌಡರು ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸಿದ್ದು, ನ್ಯಾಯಾಂಗದ ಮೇಲಿನ ಅವರ ನಂಬಿಕೆಯನ್ನು ಇದು ಬಲಪಡಿಸಿದೆ ಎಂದು ಹೇಳಿದರು.
“ಅವರು ಹೈಕೋರ್ಟ್ನಿಂದ ಜಾಮೀನು ಪಡೆದಾಗ, ನಾವು ಒತ್ತಡಕ್ಕೊಳಗಾಗಿದ್ದೆವು, ಆದರೆ ಸರ್ಕಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತು ಮತ್ತು ಇಂದು ಆ ಜಾಮೀನನ್ನು ರದ್ದುಗೊಳಿಸಲಾಗಿದೆ. ಯಾವುದೇ ಅಪರಾಧಿ ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಬಲವಾದ ಸಂದೇಶವನ್ನು ಸುಪ್ರೀಂ ಕೋರ್ಟ್ ರವಾನಿಸಿದೆ” ಎಂದು ಅವರು ಹೇಳಿದರು.

“ಯಾರೇ ತಪ್ಪು ಮಾಡಿದ್ದರೂ ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು” ಎಂದು ರೇಣುಕಾಸ್ವಾಮಿಯ ಪತ್ನಿ ಹೇಳಿದರು

