ಕೊಚ್ಚಿ: ತನ್ನ ಸಂಬಂಧಿ ಯುವತಿಯನ್ನು ವೇಶ್ಯಾವಾಟಿಕೆ ಜಾಲಕ್ಕೆ ಒಪ್ಪಿಸಲು ಯತ್ನಿಸಿದ ಆರೋಪದ ಮೇಲೆ ಮಲಯಾಳಂ ನಟಿ ಮಿನು ಮುನೀರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚೆನ್ನೈನ ತಿರುಮಂಗಲಂ ಪೊಲೀಸರು ಅಲುವಾದಲ್ಲಿ ಮಿನು ಮುನೀರನ್ನು ವಶಕ್ಕೆ ಪಡೆದಿದ್ದಾರೆ.ಚಿತ್ರದಲ್ಲಿ ನಾಯಕಿ ಪಾತ್ರ ನೀಡುವ ನೆಪದಲ್ಲಿ ಸಂಬಂಧಿ ಯುವತಿಯನ್ನು ತಮಿಳುನಾಡಿಗೆ ಕರೆತಂದು ನಂತರ ಲೈಂಗಿಕ ಮಾಫಿಯಾಕ್ಕೆ ಒಪ್ಪಿಸಲು ಪ್ರಯತ್ನಿಸಲಾಗಿದೆ ಎಂದು ದೂರು ದಾಖಲಾಗಿತ್ತು. ಈ ಘಟನೆ 2014 ರಲ್ಲಿ ನಡೆದಿದ್ದು.ಈ ಬಗ್ಗೆ ಯುವತಿಯು ದೂರು ದಾಖಲಿಸಿದ್ದು ಹೆಚ್ಚಿನ ತನಿಖೆಗಾಗಿ ನಟಿ ಮಿನು ಮುನೀರ್ ಅವರನ್ನು ಚೆನೈಗೆ ಕರೆದೊಯ್ಯಲಾಗಿದೆ

ಕಳೆದ ತಿಂಗಳು ನಟ,ನಿರ್ದೇಶಕ ಬಾಲಚಂದ್ರ ಮೆನನ್ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಪೊಲೀಸರು ಮಿನು ಮುನೀರ್ ಅವರನ್ನು ಬಂಧಿಸಿದ್ದರು.ಅವರು ಸಾಮಾಜಿಕ ಮಾಧ್ಯಮದಲ್ಲಿ ನಟ ಬಾಲಚಂದರನ್ನು ಅವಮಾನಿಸಿದ್ದರು. ಕೊಚ್ಚಿ ಇನ್ಫೋಪಾರ್ಕ್ ಪೊಲೀಸರು ಬಂಧಿಸಿದ್ದ ನಟಿಯನ್ನು ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.’ದೇ ಇಂಗೊಟ್ಟು ನೋಕ್ಕಿಯೇ’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ನಿರ್ದೇಶಕ ಬಾಲಚಂದ್ರ ಮೆನನ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಮಿನು ಸಾಮಾಜಿಕ ಮಾಧ್ಯಮದಲ್ಲಿ ಆರೋಪಿಸಿದ್ದರು.

ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳಾ ನಟಿಯರಿಗೆ ಆಗುತ್ತಿರುವ ದೌರ್ಜನ್ಯದ ಅಧ್ಯಯನ ಮಾಡಲು ಸರ್ಕಾರ ನೇಮಿಸಿದ್ದ ಹೇಮಾ ಸಮಿತಿ ವರದಿಯಲ್ಲಿನ ಅಂಶಗಳು ಬಹಿರಂಗವಾದಾಗ, ಮಿನು ಮುನೀರ್ ಮುಂದೆ ಬಂದು ಕೆಲವು ನಟರ ವಿರುದ್ಧ ಲೈಂಗಿಕ ಆರೋಪಗಳನ್ನು ಮಾಡಿದರು. ಮಿನು ತನ್ನ ಫೇಸ್ಬುಕ್ ಪುಟದ ಮೂಲಕ ಜಯಸೂರ್ಯ, ಮುಖೇಶ್, ಮಣಿಯನ್ ಪಿಳ್ಳೈ ರಾಜು, ಎಡವಲೆ ಬಾಬು, ಅಡ್ವ. ಚಂದ್ರಶೇಖರನ್, ಪ್ರೊಡಕ್ಷನ್ ಕಂಟ್ರೋಲರ್ ನೋಬಲ್ ಮತ್ತು ವಿಚು ವಿರುದ್ಧ ಆರೋಪಗಳನ್ನು ಮಾಡಿದ್ದರು.ಇದೀಗ ನಟಿ ಮಿನು ಮುನೀರ್ ಅವರೇ ವೇಶ್ಯಾವಾಟಿಕೆ ಪ್ರಕರಣದಲ್ಲಿ ಪೋಲಿಸರ ಅತಿಥಿಯಾಗಿದ್ದಾರೆ.


