ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳ ಬಂಧನ ಆಗಿದೆ. ಎಲ್ಲರನ್ನೂ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿದೆ. ಹೀಗೆ ನ್ಯಾಯಾಂಗ ಬಂಧನಕ್ಕೆ ಕಳಿಸುವ ಮುಂಚೆ ಎಲ್ಲಾ ಆರೋಪಿಗಳ ಚಿತ್ರಗಳು, ಬೆರಳಚ್ಚು ತೆಗೆದುಕೊಂಡು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಕೊಂಡಿದ್ದರು.

ಆದರೆ ನಟ ದರ್ಶನ್ ಅವರು ಜೈಲಿಗೆ ಹೋಗುವ ಮುಂಚೆ ತಮ್ಮ ಲುಕ್ ಬದಲಾಯಿಸಿಕೊಂಡಿದ್ದಾರೆ. ದರ್ಶನ್ ತಲೆಗೂದಲು ಸಂಪೂರ್ಣವಾಗಿ ಬೋಳಿಸಿಕೊಂಡು ಬೋಳು ತಲೆ ಮಾಡಿಕೊಂಡಿದ್ದಾರೆ. ದರ್ಶನ್ ಅವರು ಬಂಧನಕ್ಕೆ ಒಳಗಾಗುವ ದಿನದಂದು ಮಾದೇಶ್ವರ ಬೆಟ್ಟಕ್ಕೆ ತೆರಳಿ ದೇವರಿಗೆ ಮುಡಿ ಕೊಟ್ಟು ಬಂದಿದ್ದರು ಎನ್ನಲಾಗಿದೆ. ಅಲ್ಲಿಂದ ಬೆಂಗಳೂರಿಗೆ ಬಂದ ಬಳಿಕ ಅವರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದರು.

