ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ಜನ್ ಸುನ್ವೈ (ಸಾರ್ವಜನಿಕ ಸಭೆ) ಸಂದರ್ಭದಲ್ಲಿ ದಾಳಿ ನಡೆಸಲಾಗಿದೆ.ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿಯವರ ಜನಸಭಾ ಉಪಕ್ರಮದ ಭಾಗವಾಗಿ ಆಯೋಜಿಸಲಾದ ಸಾರ್ವಜನಿಕ ಸಭೆಯಲ್ಲಿ ರೇಖಾ ಗುಪ್ತಾ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಪಕ್ಷದ ಮೂಲಗಳು ಪ್ರಕಾರ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ಸುಮಾರು 35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ದಾಳಿ ನಡೆಸಿದ್ದಾರೆ. ಸಾರ್ವಜನಿಕರ ಅಹವಾಲು ಸ್ವೀಕರಿಸುವ ಸಮಯದಲ್ಲಿ ಆರೋಪಿ ಮುಖ್ಯಮಂತ್ರಿಗೆ ಕೆಲವು ಕಾಗದಪತ್ರಗಳನ್ನು ಹಸ್ತಾಂತರಿಸಿದರು ನಂತರ ಅವರ ಮೇಲೆ ಹಲ್ಲೆಗೆ ಯತ್ನಿಸಿದರು ಎಂದು ಆರೋಪಿಸಲಾಗಿದೆ.
ಹಿರಿಯ ಬಿಜೆಪಿ ನಾಯಕರು ಮತ್ತು ದೆಹಲಿ ಪೊಲೀಸ್ ಉನ್ನತ ಅಧಿಕಾರಿಗಳು ಮುಖ್ಯಮಂತ್ರಿಗಳ ನಿವಾಸಕ್ಕೆ ಧಾವಿಸಿ ಆವರಣವನ್ನು ಭದ್ರಪಡಿಸಿಕೊಂಡಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ದಾಳಿಕೋರನನ್ನು ರಾಜೇಶ್ ಸಕ್ರಿಯ ಎಂದು ಗುರುತಿಸಲಾಗಿದೆ, ಈತ ಮೂಲತಃ ಗುಜರಾತ್ನ ರಾಜ್ಕೋಟ್ನಾಗಿದ್ದಾನೆ. ರಾಜೇಶ್ ಒಬ್ಬ ನಾಯಿ ಪ್ರಿಯರಾಗಿದ್ದು, ದೆಹಲಿ ಎನ್ಸಿಆರ್ನಲ್ಲಿ ಬೀದಿ ನಾಯಿಗಳನ್ನು ಒಟ್ಟುಗೂಡಿಸಿ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವ ಸುಪ್ರೀಂ ಕೋರ್ಟ್ನ ಇತ್ತೀಚಿನ ತೀರ್ಪಿನಿಂದ ಅವರು ಅಸಮಾಧಾನಗೊಂಡಿದ್ದಾರೆ ಎಂದು ಅವರ ತಾಯಿ ಭಾನು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

