ಉಡುಪಿ: ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಬ್ರಹ್ಮಾವರ ತಾಲೂಕು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಈಗ ಬಗ್ಗೆ ವ್ಯಕ್ತಿಯೊಬ್ಬರು ತಿಮರೋಡಿ ವಿರುದ್ದ ಬ್ರಹ್ಮಾವರ ಠಾಣೆಯಲ್ಲಿ ದೂರು ನೀಡಿದ್ದರು.ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ನೋಟೀಸ್ ನೀಡಿದರೂ ಹಾಜರಾಗದ ಹಿನ್ನೆಲೆ ಇಂದು ಬ್ರಹ್ಮಾವರ ಪೊಲೀಸರು ಉಜಿರೆಗೆ ತೆರಳಿ ತಿಮರೋಡಿಯನ್ನು ಅವರ ನಿವಾಸದಲ್ಲಿ ಬಂಧಿಸಿದ್ದರು.ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ ಪೋಲಿಸರು ಮಧ್ಯಾಹ್ನ ವೇಳೆಗೆ ಮೆಡಿಕಲ್ ಪರೀಕ್ಷೆ ನಡೆಸಿ ಬ್ರಹ್ಮಾವರ ತಾಲೂಕು ಕೋರ್ಟ್ಗೆ ಹಾಜರು ಪಡಿಸಿದರು.

ಈ ಸಂದರ್ಭದಲ್ಲಿ ತಿಮರೋಡಿ ಪರ ವಕೀಲರು ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ಜಾಮೀನು ನೀಡಲು ನಿರಾಕರಿಸಿದ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.ಬಳಿಕ ಮಹೇಶ್ ಶೆಟ್ಟಿಯವರನ್ನು ಹಿರಿಯಡಕ ಜೈಲಿಗೆ ಕರೆದೊಯ್ಯಲಾಯಿತು. ಮುಂದಿನ ಜಾಮೀನು ಅರ್ಜಿಯ ವಿಚಾರಣೆಯನ್ನು ಅಗಸ್ಟ್ 23ಕ್ಕೆ ಮುಂದೂಡಲಾಗಿದೆ.
ದೂರಿನಲ್ಲಿ ಎರಡು ಜಾಮೀನು ರಹಿತ ಸೆಕ್ಷನ್ ಹಾಕಲಾಗಿದೆ. ಎರಡು ಸೆಕ್ಷನ್ ನಲ್ಲಿ ಮೂರು ವರ್ಷ ಶಿಕ್ಷೆ ಮತ್ತು ದಂಡ ಇರುತ್ತದೆ. ಸೋಮವಾರ ತಿಮರೋಡಿಗೆ ಜಾಮೀನು ಸಿಗಲಿದೆ ಎಂದು ತಿಮರೋಡಿ ಪರ ವಕಿಲರು ವಿಶ್ವಾಸ ವ್ಯಕ್ತಪಡಿಸಿದರು.

