ಬೆಂಗಳೂರು : ಐತಿಹಾಸಿಕ ಮೈಸೂರು ದಸರಾ 2025ಕ್ಕೆ ದಿನಗಣನೆ ಆರಂಭವಾಗಿದೆ. 2025ರ ದಸರಾ ಹಬ್ಬವನ್ನು ಯಾರು ಉದ್ಘಾಟಿಸುತ್ತಾರೆ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ. 2025ರ ಮೈಸೂರು ದಸರಾವನ್ನು ಖ್ಯಾತ ಸಾಹಿತಿ ಹಾಗೂ ಬೂಕರ್ ಪ್ರಶಸ್ತಿ ಪುರಸ್ಕೃತ ಭಾನು ಮುಷ್ತಾಕ್ ಉದ್ಘಾಟಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಮೊದಲು ಈ ಬಾರಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರನ್ನು ಈ ಬಾರಿಯ ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆ ಮಾಡಲಾಗಿತ್ತು ಎನ್ನುವ ಸುದ್ದಿ ಹರಿದಾಡಿದ್ದವು. ಆದರೆ ಇದಕ್ಕೆ ಸಿಎಂ ಕಚೇರಿ ಪ್ರತಿಕ್ರಿಯಿಸಿ ಅದು ಸುಳ್ಳು. ಆ ರೀತಿಯ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟನೆ ನೀಡಿದೆ.

ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ದಸರಾ ಮಹೋತ್ಸವ ಉದ್ಘಾಟನೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್ ಅವರು ಉದ್ಘಾಟಿಸಲಿದ್ದಾರೆ. ಅವರ ಹೃದಯ ದೀಪ ಕೃತಿಗೆ ಬೂಕರ್ ಪ್ರಶಸ್ತಿ ಸಿಕ್ಕಿದ್ದು, ಕರ್ನಾಟಕದ ಮಹಿಳೆಗೆ ಬೂಕರ್ ಪ್ರಶಸ್ತಿ ಸಿಕ್ಕಿದ್ದು ಬಹಳ ಸಂತೋಷ ಆಗಿದೆ. ಹೋರಾಟದ ಹಿನ್ನೆಲೆಯಿಂದ ಬಂದ ಬಾನು ಮುಷ್ತಾಕ್ ಅವರು ರೈತ ಮತ್ತು ಕನ್ನಡ ಚಳವಳಿಯಲ್ಲಿ ಕೆಲಸ ಮಾಡಿದ್ದಾರೆ. ಹೀಗಾಗಿ ಬಾನು ಮುಷ್ತಾಕ್ ಅವರನ್ನು 2025ರ ದಸರಾ ಮಹೋತ್ಸವ ಉದ್ಘಾಟನೆಗೆ ಆಹ್ವಾನ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.


