ಮಂಗಳೂರು : ಬಂಟರ ಯಾನೆ ನಾಡವರ ಮಾತೃಸಂಘ, ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳು ಹಾಗೂ ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 19ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ತೆನೆಹಬ್ಬ, ಅಷ್ಟೋತ್ತರ ನಾರಿಕೇಳ ಮಹಾಗಣಯಾಗವು ಆಗಸ್ಟ್ ತಿಂಗಳ ತಾರೀಕು 27ರಿಂದ 29 ರವರೆಗೆ ಮಂಗಳೂರಿನ ಓಂಕಾರ ನಗರ ಬಂಟ್ಸ್ ಹಾಸ್ಟೆಲ್ನಲ್ಲಿ ಜರಗಲಿದೆ ಎಂದು ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ಟ್ರಸ್ಟಿ ಡಾ.ಆಶಾಜ್ಯೋತಿ ರೈ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ದಿನಾಂಕ 26.08.2025ರ ಮಂಗಳವಾರ ಸಂಜೆ 4.00 ಗಂಟೆಗೆ ಶರವು ದೇವಸ್ಥಾನದ ಬಳಿಯಿರುವ ರಾಧಾಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ ಶ್ರೀ ರಾಮದಾಸ್ ಆಚಾರರವರ ಶಿಷ್ಯರಿಂದ ರಚಿಸಲ್ಪಟ್ಟ ಶ್ರೀ ಸಿದ್ಧಿವಿನಾಯಕ ದೇವರ ವಿಗ್ರಹವನ್ನು ಬಂಟ್ಸ್ ಹಾಸ್ಟೆಲ್ನ ಓಂಕಾರ ನಗರಕ್ಕೆ ಬರಮಾಡಿಕೊಂಡು ದಿನಾಂಕ 27 ಬುಧವಾರ ಬೆಳಿಗ್ಗೆ 9.00 ಗಂಟೆಗೆ ಧ್ವಜಾರೋಹಣ, ಗಣೇಶೋತ್ಸವ ಕಾರ್ಯಕ್ರಮಗಳ ಉದ್ಘಾಟನೆ ನಂತರ ತೆನೆವಿತರಣಾ ಕಾರ್ಯಕ್ರಮ ಜರಗುವುದು. ಸಂಜೆ ಗಂಟೆ 5.00ರಿಂದ 7.00 ರವರೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿರುವುದು. ಈ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು. ರಾತ್ರಿ ಗಂಟೆ 8.00ರಿಂದ ‘ಲಾಸ್ಯ – 2025’ ರಾಷ್ಟ್ರೀಯ ಬಂಟ ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿರುವುದು.

ದಿನಾಂಕ 28 ರಂದು ಗುರುವಾರ ಸಂಜೆ ಗಂಟೆ 5.00ರಿಂದ 7.00ರವರೆಗೆ ಧಾರ್ಮಿಕ ಸಭೆ ನಡೆಯುವುದು. ಈ ಸಂದರ್ಭದಲ್ಲೂ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು. ರಾತ್ರಿ ಗಂಟೆ 8.00ರಿಂದ ‘ಹೇರಂಭ ಗಜವದನಾ’ (ರಂಗಸಂಗೀತ-ಜನಪದ ಗಾಯನ) ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿರುವುದು.
ದಿನಾಂಕ 29.08.2025ರ ಶುಕ್ರವಾರದಂದು ಬೆಳಿಗ್ಗೆ ಗಂಟೆ 8.00ರಿಂದ ಲೋಕಕಲ್ಯಾಣಾರ್ಥವಾಗಿ ಅಷ್ಟೋತ್ತರ ಸಹಸನಾರಿಕೇಳ ಮಹಾಗಣಯಾಗ ಆರಂಭಗೊಂಡು ಬೆಳಿಗ್ಗೆ 11.30ಕ್ಕೆ ಪೂರ್ಣಾಹುತಿಗೊಳ್ಳಲಿದೆ. ಮಧ್ಯಾಹ್ನ 3.30ಕ್ಕೆ ಸಮಾಜದ ವಿವಿಧ ಗಣ್ಯರಿಂದ ಶೋಭಾಯಾತ್ರೆಗೆ ಚಾಲನೆ ದೊರೆಯಲಿದ್ದು, ಶೋಭಾಯಾತ್ರೆಯು “ಓಂಕಾರ ನಗರ’ ದಿಂದ ಶ್ರದ್ಧಾ ಭಕ್ತಿಯಿಂದ ಹೊರಟು ಜಿಲ್ಲೆಯ ವಿವಿಧ ಭಜನಾ ತಂಡಗಳಿಂದ ಶೋಭಾಯಾತ್ರೆಯು ಬಂಟ್ಸ್ ಹಾಸ್ಟೆಲ್, ಪಿ.ವಿ.ಎಸ್ ವೃತ್ತ, ನ್ಯೂಚಿತ್ರಾ ಟಾಕೀಸ್, ರಥಬೀದಿ, ವೆಂಕಟರಮಣ ದೇವಸ್ಥಾನ ರಸ್ತೆಯಲ್ಲಿ ಸಾಗಿ ಶ್ರೀ ಮಹಾಮ್ಮಾಯಿ ದೇವಸ್ಥಾನದ ಕೆರೆಯಲ್ಲಿ
ವಿಸರ್ಜಿಸಲಾಗುವುದು.

ಈ ಮೂರು ದಿನಗಳ ಕಾಲ ವೈದಿಕ ಕಾರ್ಯಕ್ರಮಗಳೊಂದಿಗೆ ವಿವಿಧ ಪೂಜೆಗಳು ಜರಗಲಿರುವುದು. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಬಂಟ ಸಮಾಜಬಾಂಧವರು ಮತ್ತು ಸಾರ್ವಜನಿಕರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಗಣೇಶೋತ್ಸವದ ವೇದಿಕೆಯಲ್ಲಿ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಲಿರುವುದು ಎಂದರು.

ಪತ್ರಿಕಾಗೋಷ್ಟಿಯಲ್ಲಿ ಮನೀಷ್ ರೈ, ಅಶ್ವಥಾಮ ಹೆಗ್ಡೆ, ಸದಾಶಿವ ಶೆಟ್ಟಿ, ಹರೀಶ್ ಶೆಟ್ಟಿ ಬಜ್ಜೆ, ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.

