ಮಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ಸುಮಾರು 75ಕ್ಕೂ ಮಿಕ್ಕಿ ನಾಟಕ ತಂಡಗಳಿದ್ದು, 3000ಕ್ಕೂ ಮಿಕ್ಕಿ ಕಲಾವಿದರು, ತಂತ್ರಜ್ಞರು,ಸಂಗೀತಗಾರರು, ಪ್ರಸಾದನ, ವೇಷಭೂಷಣ, ನ್ರತ್ಯಸಂಯೋಜನೆ ಮುಂತಾದ ನಾಟಕ ಸಂಬಂಧಿ ಕೆಲಸಗಳಲ್ಲಿ ಜೀವನ ನಿರ್ವಹಣೆ ಮಾಡಿಕೊಂಡು ನಾಟಕವನ್ನೇ ನಂಬಿಕೊಂಡು ಬದುಕುವವರಿರುತ್ತಾರೆ. ಅಲ್ಲದೆ ಮುಂಬರುವ ಗಣೇಶ ಹಬ್ಬದಿಂದ ತೊಡಗಿ ಮೇ ತಿಂಗಳ ಅಂತ್ಯದವರೆಗೆ ನಿರಂತರ ನಾಟಕ ಪ್ರದರ್ಶನಗಳು ನಡೆಯುತ್ತಿರುತ್ತದೆ ಎಲ್ಲಾ ನಾಟಕಗಳು ಪ್ರೇಕ್ಷಕರನ್ನು ತಲುಪಬೇಕಾದರೆ ಧ್ವನಿವರ್ಧಕಗಳ ಬಳಕೆ ಅತ್ಯವಶ್ಯಕವಾಗಿರುತ್ತದೆ. ನಾಟಕ, ಯಕ್ಷಗಾನ, ಸಂಗೀತ ರಸಮಂಜರಿ ಕಾರ್ಯಕ್ರಮಗಳು, ನೃತ್ಯ ಪ್ರದರ್ಶನಗಳು ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಗಳು ನಿರಂತರವಾಗಿ ನಡೆಯಬೇಕಾದರೆ ಧ್ವನಿವರ್ಧಕದ ಬಳಕೆ ಬಹು ಮುಖ್ಯ ಪಾತ್ರವಹಿಸುತ್ತದೆ ಎಂದು ತುಳು ನಾಟಕ ಕಲಾವಿದರ ಒಕ್ಕೂಟದ ಪ್ರ.ಕಾರ್ಯದರ್ಶಿ ಲಕ್ಷ್ಮಣ್ ಕುಮಾರ್ ಮಲ್ಲೂರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಇದೀಗ ಗಣೇಶ ಹಬ್ಬ ಪ್ರಾರಂಭವಾಗುವ ಸಂದರ್ಭದಲ್ಲಿ ಧ್ವನಿವರ್ಧಕ ಕಾರ್ಯಕ್ರಮಗಳಿಗೆ ಧ್ವನಿವರ್ಧಕ ಒದಗಿಸಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಹಲವರಿಗೆ ಪೋಲಿಸ್ ಇಲಾಖೆಯವರು ನೋಟಿಸು ನೀಡಿದ್ದು, ಮುಂದೆ ಧ್ವನಿವರ್ಧಕ ಸಾಮಾಗ್ರಿಗಳನ್ನು ಮುಟ್ಟುಗೋಲು ಹಾಕಿ ಕೇಸು ದಾಖಲಿಸಿರುವುದಾಗಿ ತಿಳಿದು ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ನಾಟಕ ತಂಡಗಳು ನಾಟಕ ಪ್ರದರ್ಶನ ನೀಡಲು ಸಾಧ್ಯವಾಗದೆ ಇಕ್ಕಟ್ಟಿಗೆ ಸಿಲುಕಿ ಒದ್ದಾಡುವ ಪರಿಸ್ಥಿತಿ ಬಂದಿದೆ ಎಂದು ಲಕ್ಷ್ಮಣ್ ಕುಮಾರ್ ಹೇಳಿದರು.

ನಂತರ ವಿಜಯಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ ದ.ಕ ಜಿಲ್ಲೆಯಲ್ಲಿ ಧಾರ್ಮಿಕ ಕಾರ್ಯಕ್ರಮವಾಗಲಿ ಅಥವಾ ಸಾಂಸ್ಕೃತಿಕ ಕಾರ್ಯಕ್ರಮವಾಗಲಿ ರಾತ್ತಿ ವೇಳೆಯಲ್ಲಿಯೇ ನಡೆಯುತ್ತಿದ್ದು ಸರಕಾರ ನಿಗದಿ ಪಡಿಸಿದ ರಾತ್ರಿ10.30ಕ್ಕೆ ಯಾವುದೇ ಕಾರ್ಯಕ್ರಮ ಮುಗಿಸಲು ಸಾಧ್ಯವಾಗುವುದಿಲ್ಲ. ಒಂದು ನಾಟಕ ಪ್ರಾರಂಭವಾದರೆ ಅರ್ಧದಲ್ಲಿ ನಾಟಕ ನಿಲ್ಲಿಸುವುದು ಸರಿಯಲ್ಲ. ತುಳುನಾಡಲ್ಲಿ ನಾಟಕ, ಯಕ್ಷಗಾನ, ನೇಮಕೋಲ ಇತ್ಯಾದಿಗಳು ನಡೆಯುವುದೇ ರಾತ್ರಿ ಹೊತ್ತಲ್ಲಿ ,ಈ ಎಲ್ಲಾ ಉತ್ಸವಗಳಿಗೆ ಸಮಯದ ಮಿತಿ ಹಾಗೂ ಶಬ್ಧ ಬಳಕೆಯ ಮಿತಿ ಹೇರುವುದು ಸರಿಯಲ್ಲ. ನಾಟಕಗಳಿಗೆ ಪೂರಕವಾದ ಧ್ವನಿ ಬಳಕೆ, ಸಂಗೀತ ಬಳಕೆಗೆ ನಿಗದಿಪಡಿಸಿರುವ 50-65 ಡಿಸಿಬಲ್ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತವೇ ರಾಜಧಾನಿಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಿಗೆ ಈ ಮಿತಿ ಹೇರಿರುವುದು ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಹಬ್ಬಹರಿದಿನಗಳಲ್ಲಿ ಮಾತ್ರವಲ್ಲದೆ ನಾಟಕಗಳು ವರ್ಷಪೂರ್ತಿ ನಿರಂತರ ನಡೆಯುತ್ತಾ ಬರುತ್ತಿದೆ. ಹಾಗಾಗಿ ನಾಟಕಗಳಿಗೆ ಬಳಸುವ ಧ್ವನಿವರ್ಧಕಗಳಿಗೆ ಬೇಕಾದ ಪ್ರಮಾಣದಲ್ಲಿ ಧ್ವನಿವರ್ಧಕಗಳನ್ನು ಬಳಸುವರೇ ಹಾಗೂ ರಾತ್ರಿ ಸಮಯದ ಮಿತಿಗೆ ವಿನಾಯಿತಿ ನೀಡುವಂತೆ, ಜಿಲ್ಲಾಡಳಿತವನ್ನು ವಿನಂತಿಸುತ್ತೇವೆ ಎಂದು ಹೇಳಿದರು.

ಪತ್ರಿಕಾಗೋ಼ಷ್ಠಿಯಲ್ಲಿ ದೇವದಾಸ್ ಕಾಪಿಕಾಡ್, ಲಂಚುಲಾಲ್, ಗೋಕುಲ್ ಕದ್ರಿ ಉಪಸ್ಥಿತರಿದ್ದರು

