ಮಂಗಳೂರು : ಎಂ.ಎನ್.ಆರ್. ಪ್ರೊಡಕ್ಷನ್ ಬ್ಯಾನರ್ ನಲ್ಲಿ ಎಂ.ಎನ್ ರಾಜೇಂದ್ರ ಕುಮಾರ್ ನಿರ್ಮಾಣದ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಕಥೆ,ಸಂಭಾಷಣೆ ಹಾಗೂ ನಿರ್ದೇಶನದ ಡಾಕ್ಟ್ರಾ- ಭಟ್ರಾ ತುಳು ಚಲನಚಿತ್ರದ ಮುಹೂರ್ತ ಸಮಾರಂಭ ಇಂದು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಸನ್ನಿಧಿಯಲ್ಲಿ ನಡೆಯಿತು. ಡಾ|ಎ.ಜೆ ಶೆಟ್ಟಿ , ಡಾ|ಎಂ.ಎನ್.ರಾಜೇಂದ್ರ ಕುಮಾರ್ ಹಾಗೂ ಶಾಸಕ ವೇದವ್ಯಾಸ ಕಾಮತ್ ಅವರು ಕೆಮರಾ ಚಾಲನೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ಎಂ.ಎನ್ ರಾಜೇಂದ್ರ ಕುಮಾರ್ ಎಂ.ಎನ್.ಆರ್. ಪ್ರೊಡಕ್ಷನ್ ಸಂಸ್ಥೆ ತುಳುನಾಡಿನ ಸಂಸ್ಥೆಯಾಗಿರುವುದರಿಂದ ತುಳುಭಾಷೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದೀಗ ಎರಡನೇ ಸಿನಿಮಾವನ್ನು ತುಳುಭಾಷೆಯಲ್ಲಿ ನಿರ್ಮಿಸಲು ಉತ್ಸುಕವಾಗಿದೆ. ತುಳು ರಂಗಭೂಮಿಯ ಕ್ರಿಯಾಶೀಲ ಹಾಗೂ ವಿಭಿನ್ನ ಯೋಚನೆಯ ನಿರ್ದೇಶಕರಾದ ವಿಜಯಕುಮಾರ್ ಕೊಡಿಯಾಲ್ಬೈಲ್ ಅವರ ಕಥೆ, ಸಂಭಾಷಣೆ ಹಾಗೂ ನಿರ್ದೇಶನದಲ್ಲಿ “ಡಾಕ್ಟ್ರಾ-ಭಟ್ರಾ?” ಎನ್ನುವ ತುಳು ಸಿನಿಮಾ ನಿರ್ಮಾಣವಾಗಲಿದೆ ಎಂದರು

ಎಂ.ಎನ್.ಆರ್ ಸಂಸ್ಥೆಯು 2009ರಂದು ಆರಂಭಗೊಂಡು “ಜೋಗುಳ” ಎಂಬ ಮೆಗಾ ಧಾರಾವಾಹಿಯನ್ನು ಕಿರುತೆರೆಗೆ ಅರ್ಪಿಸಿದೆ. ವಿನು ಬಳಂಜ ಅವರ ನಿರ್ದೇಶನದಲ್ಲಿ ಸುಮಾರು 600 ಕಂತುಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿರುವ ಈ ಧಾರಾವಾಹಿಯು ಜನಮೆಚ್ಚುಗೆಯನ್ನು ಪಡೆದಿರುತ್ತದೆ. ಹಾಗೆನೇ ಪ್ರತಿಭಾವಂತ ನಿರ್ದೇಶಕ ಎಂ.ಡಿ. ಶ್ರೀಧರ್ ಅವರ ನಿರ್ದೇಶನದಲ್ಲಿ “ಗಲಾಟೆ” ಎಂಬ ಸಿನಿಮಾ ಪ್ರಜ್ವಲ್ ದೇವರಾಜ್ ಹಾಗೂ ಬಹುತಾರಾಗಣದಲ್ಲಿ ನಿರ್ಮಾಣವಾಗಿರುವುದು ಎಂ.ಎನ್.ಆರ್. ಪ್ರೊಡಕ್ಷನ್ ಸಂಸ್ಥೆಯ ಮೊದಲ ಚಲನಚಿತ್ರವಾಗಿರುತ್ತದೆ ಎಂದರು.

ನಂತರ ವಿಜಯಕುಮಾರ್ ಕೊಡಿಯಾಲ್ಬೈಲ್ ಮಾತನಾಡಿ ಎಂ.ಎನ್.ಆರ್. ಪ್ರೊಡಕ್ಷನ್ ಸಂಸ್ಥೆಯ ಬ್ಯಾನರ್ನ ಚಿತ್ರವನ್ನು ನಿರ್ದೇಶಿಸುವುದು ನಮಗೆ ಹೆಮ್ಮೆಯ ವಿಚಾರ. ಇದೊಂದು ವಿಭಿನ್ನ ಕಥಾಹಂದರವನ್ನು ಹೊಂದಿದ್ದು, ವಿಜ್ಞಾನ ಮತ್ತು ಆಚಾರ-ವಿಚಾರಗಳ ಸಂಘರ್ಷದಲ್ಲಿ ಕಥೆ ಹೆಣೆಯಲ್ಪಟ್ಟಿರುತ್ತದೆ. ಉತ್ತಮ ಸಂದೇಶದೊಂದಿಗೆ ಸಂಪೂರ್ಣ ಮನೋರಂಜನಾತ್ಮಕ ಚಿತ್ರ ಇದಾಗಿದ್ದು, ತುಳು ಚಿತ್ರರಂಗ ಮತ್ತು ತುಳು ರಂಗಭೂಮಿಯ ಜನಪ್ರಿಯ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಈ ಚಿತ್ರಕ್ಕೆ ಸಂಗೀತದ ಸಾರಥ್ಯ ವಹಿಸಲಿದ್ದಾರೆ.ಚಿತ್ರದ ಚಿತ್ರೀಕರಣ ಸುಮಾರು 30 ದಿನಗಳ ಕಾಲ ನೀರುಮಾರ್ಗ ಸುತ್ತಮುತ್ತ ನಡೆಯಲಿದೆ.
ಈ ಚಲನಚಿತ್ರದ ನಿರ್ಮಾಣ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಪ್ರೇಮ್ ಶೆಟ್ಟಿ ಫಿಲ್ಮ್ ನ ಪ್ರೇಮ್ ಶೆಟ್ಟಿ ಸುರತ್ಕಲ್ ಮತ್ತು ಉದ್ಯಮಿ ಜಯಪ್ರಕಾಶ್ ತುಂಬೆ ಅವರು ವಹಿಸಲಿದ್ದಾರೆ.


ಸಮಾರಂಭದಲ್ಲಿ ದೇವದಾಸ್ ಕಾಪಿಕಾಡ್,ಪ್ರಕಾಶ್ ಪಾಂಡೇಶ್ವರ್,ಪ್ರೇಮ್ ಶೆಟ್ಟಿ ಸುರತ್ಕಲ್, ನವೀನ್ ಡಿ.ಪಡೀಲ್, ಗೋಪಿನಾಥ್ ಭಟ್, ಜಗನ್ನಾಥ್ ಶೆಟ್ಟಿ ಬಾಳ, ತ್ರಿಶೂಲ್ ಶೆಟ್ಟಿ, ರಾಜೇಶ್ ಕುಡ್ಲ, ಶರ್ಮಿಳಾ ಕಾಪಿಕಾಡ್, ರೂಪಾ ವರ್ಕಾಡಿ, ಆರ್.ಧನರಾಜ್, ಪಮ್ಮಿ ಕೊಡಿಯಾಲ್ ಬೈಲ್, ಕೆ.ಕೆ ಪೇಜಾವರ,ನರೇಶ್ ಶೆಣೈ, ಉಪಸ್ಥಿತರಿದ್ದರು

