ಕುಂದಾಪುರ :/ರಂಗಭೂಮಿ ಹಾಗೂ ಚಲನಚಿತ್ರ ನಟ ದಿನೇಶ್ ಮಂಗಳೂರು ಅವರು ಇನ್ನಿಲ್ಲ.ಕನ್ನಡ ಚಿತ್ರರಂಗದಲ್ಲಿ ಕಲಾ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ದಿನೇಶ್ ಅವರು ನಂತರ ಪೋಷಕ ನಟರಾಗಿ ಬಹಳ ಚಿತ್ರಗಳಲ್ಲಿ ನಟಿಸಿ ಬೇಡಿಕೆ ನಟರಾಗಿ ಗುರುತಿಸಿಕೊಂಡಿದ್ದರು.ಇಂದು ಬೆಳಗಿನ ಜಾವ ಕುಂದಾಪುರದ ಅವರ ನಿವಾಸದಲ್ಲಿ ಕೊನೆಯುಸಿರು ಎಳೆದಿದ್ದಾರೆ.

ಕೆಜಿಎಫ್ ಚಿತ್ರದ ಶೆಟ್ಟಿ ಪಾತ್ರ ಅವರಿಗೆ ಜನಪ್ರಿಯತೆಯನ್ನು ತಂದು ಕೊಟ್ಟಿತು ಅಲ್ಲದೆ ಆ ದಿನಗಳು,ಕಿರಿಕ್ ಪಾರ್ಟಿ,ರಿಕ್ಕಿ,ರಣ ವಿಕ್ರಮ,ಅಂಬಾರಿ, ಉಳಿದವರು ಕಂಡಂತೆ,ಕಿಚ್ಚ ,ಸ್ಲಂ ಬಾಲ,ಅತಿಥಿ, ದುರ್ಗಾ ಮುಂತಾದ ಅನೇಕ ಸಿನಿಮಾಗಳಲ್ಲಿ ದಿನೇಶ್ ಮಂಗಳೂರು ಅವರು ನಟಿಸಿದ್ದರು.
ಇತ್ತಿಚಿಗೆ ಚಿತ್ರದ ಶೂಟಿಂಗ್ ನಡೆಯುತ್ತಿದ್ದ ವೇಳೆ ಅವರಿಗೆ ಪಾರ್ಶ್ವವಾಯು ಆಗಿತ್ತು.ನಂತರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆದರೆ ಒಂದು ವಾರದ ಹಿಂದೆ ಅವರು ಮತ್ತೆ ಅಸ್ವಸ್ಥರಾಗಿದ್ದರು. ಕೋಟೇಶ್ವರದ ಅಂಕದಕಟ್ಟೆ ಸರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದಾರೆ.

