ಪುತ್ತೂರು : ಪುತ್ತೂರು ತಾಲೂಕಿನ ತಹಶೀಲ್ದಾರ್ ಕಚೇರಿಯ ಭೂ ಸುಧಾರಣಾ ಶಾಖೆಯ ಎಫ್.ಡಿ.ಎ ಸುನೀಲ್ 12,000 ಲಂಚ ಸ್ವೀಕರಿಸುತ್ತಿದ್ದ ವೇಳೆ ಮಂಗಳೂರು ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಸುನೀಲ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು.ಈ ಪ್ರಕರಣದ ಮತ್ತೊಬ್ಬ ಆರೋಪಿ ಪುತ್ತೂರು ತಹಶೀಲ್ದಾರ ಕುಡಲಗಿ ಪರಾರಿಯಾಗಿದ್ದು.ಆತನಿಗಾಗಿ ಪೋಲಿಸರು ಹುಡುಕಾಟ ನಡೆಸುತ್ತಿದ್ದಾರೆ.
ದೂರುದಾರ ಚಿಕ್ಕಪ್ಪ ಎಂಬವರಿಗೆ ಸೇರಿದ 65 ಸೆಂಟ್ಸ್ ಜಮೀನು ಅಕ್ರಮ ಸಕ್ರಮದನ್ವಯ ಮಂಜೂರಾಗಿದ್ದು, ಜಾಗವನ್ನು ಪರಭಾರೆ ಮಾಡಲು ತಹಶೀಲ್ದಾರರ ನಿರಾಕ್ಷೇಪಣಾ ಪತ್ರ ಅವಶ್ಯಕವಾಗಿದ್ದರಿಂದ, 2024ರ ಡಿಸೆಂಬರ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ಬಾಕಿ ಇರುವುದರಿಂದ ಎಫ್.ಡಿ.ಎ ಸುನೀಲ್ ತಹಶೀಲ್ದಾರರ ಸಹಿಗೆ 12,000 ರೂ ಲಂಚ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಚಿಕ್ಕಪ್ಪನವರು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದರು.ಪ್ರಕರಣ ದಾಖಲಾಗುತ್ತಿದ್ದಂತೆ ಲೋಕಾಯುಕ್ತ ಪೋಲಿಸರು ದಾಳಿ ನಡೆಸಿ ಸುನೀಲ್ 12,000 ಲಂಚ ಸ್ವೀಕರಿಸುವ ವೇಳೆ ಬಂಧಿಸಿದ್ದಾರೆ.ಇದೀಗ ತಹಶೀಲ್ದಾರ ಕುಡಲಗಿ ವಿರುದ್ಧವೂ ಪ್ರಕರಣ ದಾಖಲಾಗಿದ್ದು.ತನಿಖೆ ಮುಂದುವರಿದಿದೆ.

