ಮಂಗಳೂರು : ಖ್ಯಾತ ಕೊಂಕಣಿ ಗಾಯಕ,ಸಂಗೀತ ಸಂಯೋಜಕ ಮತ್ತು ಸಾಂಸ್ಕೃತಿಕ ಕಾರ್ಯಕರ್ತ ಕೊಂಕಣಿ ಸಾಂಸ್ಕೃತಿಕ ಸಂಘಟನೆಯಾದ ಮಾಂಡ್ ಸೊಭಾಣ್ನ ಸ್ಥಾಪಕರು ಮತ್ತು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎರಿಕ್ ಅಲೆಕ್ಸಾಂಡರ್ ಒಜಾರಿಯೊ ಶುಕ್ರವಾರ ಮಂಗಳೂರಿನ ತಮ್ಮ ನಿವಾಸದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.

ಎರಿಕ್ ಒಜಾರಿಯೊ ಅವರು ಕೊಂಕಣಿ ಮಾತನಾಡುವ ಸಮುದಾಯದ ಗುರುತನ್ನು ಬಲಪಡಿಸಲು ತಮ್ಮ ಸೃಜನಶೀಲ ಪ್ರತಿಭೆಯನ್ನು ಬಳಸಿದರು. 1986ರಲ್ಲಿ ಅವರ ನಾಯಕತ್ವದಲ್ಲಿ ಸ್ಥಾಪನೆಯಾದ ಮಾಂಡ್ ಸೋಭಾಣ್ ಕೊಂಕಣಿ ಸಂಗೀತ ಮತ್ತು ಸಂಪ್ರದಾಯಗಳಿಗೆ ಜಾಗತಿಕ ಮನ್ನಣೆ ನೀಡುವ ಕಾರ್ಯಕ್ರಮಗಳು,ಪ್ರದರ್ಶನಗಳು ಮತ್ತು ಉಪಕ್ರಮಗಳನ್ನು ಆಯೋಜಿಸುವಲ್ಲಿ ಪ್ರಾಮುಖ್ಯತೆಯನ್ನು ಪಡೆಯಿತು.
ಅವರು ಸುಮಾರು 1,000 ಕ್ಕೂ ಮಿಕ್ಕಿ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.ದೇಶ ವಿದೇಶಗಳಲ್ಲಿ 800 ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದಾರೆ ಅಲ್ಲದೆ 26 ಆಡಿಯೊ ಕ್ಯಾಸೆಟ್ಗಳು ಮತ್ತು ಸಿಡಿಗಳನ್ನು ನಿರ್ಮಿಸಿದ್ದಾರೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಇತರ ಮನ್ನಣೆಗಳನ್ನು ಪಡೆದಿದ್ದಾರೆ.ಕರ್ನಾಟಕದಲ್ಲಿ ಶಾಲಾ ಶಿಕ್ಷಣದಲ್ಲಿ ಕೊಂಕಣಿಯನ್ನು ಐಚ್ಛಿಕ ಭಾಷೆಯಾಗಿ ಗುರುತಿಸಲು ಕಾರಣವಾದ ಪ್ರಯತ್ನಗಳಿಗೆ ಅವರು ಮುಂಚೂಣಿಯಲ್ಲಿದ್ದರು.ಅವರು ಪತ್ನಿ ಮತ್ತು ಇಬ್ಬರು ಮಕ್ಕಳಾದ ಡಾ. ರಶ್ಮಿ ಕಿರಣ್ ಮತ್ತು ರಿತೇಶ್ ಕಿರಣ್ ಅವರನ್ನು ಅಗಲಿದ್ದಾರೆ.
ಎರಿಕ್ ಅವರ ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆ 11:15 ಕ್ಕೆ ವೇಲೆನ್ಸಿಯಾದಲ್ಲಿರುವ ಸೇಂಟ್ ವಿನ್ಸೆಂಟ್ ಫೆರರ್ ಚರ್ಚ್ನಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ನಡೆಯಲಿದೆ.

