ಬೆಂಗಳೂರು : ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿ ಹಿರಿಯ ಐಪಿಎಸ್ ಅಧಿಕಾರಿ ಡಾ. ಎಂ ಎ ಸಲೀಂ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಡಾ. ಅಲೋಕ್ ಮೋಹನ್ ಅವರು ನಿವೃತ್ತಿ ಹಿನ್ನೆಲೆ ಐಪಿಎಸ್ ಅಧಿಕಾರಿ ಡಾ.ಎಂ.ಎ. ಸಲೀಂ ಅವರನ್ನು ಹಂಗಾಮಿ ಡಿಜಿ ಐಜಿಪಿಯಾಗಿ ನೇಮಿಸಲಾಗಿದೆ. ಡಾ. ಎಂ ಎ ಸಲೀಂ ಅವರು ಇಂದೇ ಅಧಿಕಾರಿ ವಹಿಸಿಕೊಂಡಿದ್ದಾರೆ.

ಡಾ. ಎಂ. ಎ ಸಲೀಂ ಅವರು ಬರೋಬ್ಬರಿ 32 ವರ್ಷಗಳ ಕಾಲ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು, ಸುಮಾರು 26 ವಿಭಿನ್ನ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಈಗ ರಾಜ್ಯದ ಪೊಲೀಸ್ ಪಡೆಯನ್ನು ಮುನ್ನಡೆಸುವ ಉನ್ನತ ಹುದ್ದೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಡಾ. ಅಲೋಕ್ ಮೋಹನ್ ಅವರು ನೂತನ ಡಿಜಿಪಿ ಡಾ. ಎಂ. ಎ ಸಲೀಂ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಡಾ. ಎಂ. ಎ ಸಲೀಂ ಅವರು ಗುಲ್ಬರ್ಗದಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಕುಶಾಲನಗರ ಉಪ ವಿಭಾಗದಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಸಾಗರ ಉಪ ವಿಭಾಗದಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಬೆಂಗಳೂರು ನಗರದಲ್ಲಿ ಅಪರಾಧ ವಿಭಾಗದಲ್ಲಿ ಸಹಾಯಕ ಪೊಲೀಸ್ ಮಹಾನಿರ್ದೇಶಕರಾಗಿ, ಮೈಸೂರು ನಗರದಲ್ಲಿ ಉಪ ಪೊಲೀಸ್ ಆಯುಕ್ತರಾಗಿ ಕೂಡಾ ಸೇವೆ ಸಲ್ಲಿಸಿದ್ದಾರೆ.

