ಕಾಬೂಲ್: ಭಾನುವಾರ ರಾತ್ರಿ ಪೂರ್ವ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಲ್ಲಿ 622 ಜನರು ಸಾವನ್ನಪ್ಪಿದ್ದು,1,500 ಜನರು ಗಾಯಗೊಂಡಿದ್ದಾರೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಪ್ರಕಾರ, ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆಯ ಭೂಕಂಪವು ಸ್ಥಳೀಯ ಸಮಯ ರಾತ್ರಿ 11:47 ಕ್ಕೆ (IST 12:47 AM) ಸಂಭವಿಸಿದೆ. ಭೂಕಂಪದ ಕೇಂದ್ರಬಿಂದುವು ಪೂರ್ವ ಅಫ್ಘಾನಿಸ್ತಾನದಲ್ಲಿ ಅಕ್ಷಾಂಶ 34.50N ಮತ್ತು ರೇಖಾಂಶ 70.81E ನಡುವೆ 160 ಕಿ.ಮೀ ಆಳದಲ್ಲಿತ್ತು. ಇದರ ನಂತರ 4.7, 4.3, 5.0 ಮತ್ತು 5.0 ತೀವ್ರತೆಯ ನಂತರದ ಕಂಪನಗಳು ಸಂಭವಿಸಿದವು.ಭೂಕಂಪದ ನಂತರ 13 ಮರುಕಂಪಗಳು ಸಂಭವಿಸಿವೆ. ಪಾಕಿಸ್ತಾನ ಮತ್ತು ಉತ್ತರ ಭಾರತದವರೆಗೆ ಕಂಪನದ ಅನುಭವವಾಗಿದೆ. ದೆಹಲಿ-ಎನ್ಸಿಆರ್ ಸೇರಿದಂತೆ ನಗರಗಳಲ್ಲಿ ಬಲವಾದ ಕಂಪನಗಳು ವರದಿಯಾಗಿವೆ.

ಭೂಕಂಪದ ಕೇಂದ್ರಬಿಂದು ನಂಗರ್ಹಾರ್ ಪ್ರಾಂತ್ಯದ ಜಲಾಲಾಬಾದ್ನಿಂದ ಈಶಾನ್ಯಕ್ಕೆ 27 ಕಿ.ಮೀ ದೂರದಲ್ಲಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಕುನಾರ್ ಪ್ರಾಂತ್ಯದಲ್ಲಿ ವ್ಯಾಪಕ ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುನಾರ್ ವಿಪತ್ತು ನಿರ್ವಹಣಾ ಪ್ರಾಧಿಕಾರವು ನೂರ್ ಗುಲ್, ಸೋಕಿ, ವಾಟ್ಪುರ್, ಮನೋಗಿ ಮತ್ತು ಚಪದರೆ ಜಿಲ್ಲೆಗಳು ಹೆಚ್ಚು ಹಾನಿಗೊಳಗಾಗಿವೆ ಎಂದು ದೃಢಪಡಿಸಿದೆ.ನೂರಾರು ಮನೆಗಳು ಹಾನಿಗೊಳಗಾಗಿವೆ.


ಕುನಾರ್ ಪ್ರಾಂತ್ಯದ ಸಾವ್ಕೈ ಜಿಲ್ಲೆಯ ಹಳ್ಳಿಯೊಂದರಲ್ಲಿ 20 ಜನರು ಸಾವನ್ನಪ್ಪಿದ್ದಾರೆ ಮತ್ತು 35 ಜನರು ಗಾಯಗೊಂಡಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯುವ ಪ್ರಯತ್ನಗಳು ಮುಂದುವರೆದಿವೆ.ಕುನಾರ್ ಪ್ರಾಂತ್ಯದ ಶೇ.90 ರಷ್ಟು ಪ್ರದೇಶವು ಪರ್ವತಮಯವಾಗಿದೆ. ಭೂಕಂಪದಿಂದ ಉಂಟಾದ ಭೂಕುಸಿತ ಪೀಡಿತ ಪ್ರದೇಶಗಳಿಗೆ ರಸ್ತೆ ಸಂಚಾರವನ್ನು ನಿರ್ಬಂಧಿಸಿವೆ, ಇದು ರಕ್ಷಣಾ ಕಾರ್ಯಗಳ ಮೇಲೆ ಪರಿಣಾಮ ಬೀರಿದೆ.


