ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಇಸ್ಕಾನ್ ವತಿಯಿಂದ ‘ಪೌಷ್ಟಿಕ ಆಹಾರ’ ಯೋಜನೆಗೆ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇಂದಿರಾನಗರದಲ್ಲಿರುವ ಸಿ.ವಿ.ರಾಮನ್ ನಗರ ಜನರಲ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಊಟ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಸಚಿವರು ಸದ್ಯ ಕೆಸಿ ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ, ಸಿವಿ ರಾಮನ್ ಜನರಲ್ ಆಸ್ಪತ್ರೆಯಲ್ಲಿ ಊಟ ಸಿಗಲಿದೆ. ಸುಮಾರು 9 ತಿಂಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದಕ್ಕಾಗಿ 1.37 ಕೋಟಿ ರೂಪಾಯಿ ವೆಚ್ಚವಾಗಲಿದೆ.

ಒಂದೇ ರೀತಿಯ ಸಾಮಾನ್ಯ ಆಹಾರದ ಬದಲು ರೋಗಿಗಳಿಗೆ ಅಗತ್ಯ ಪೌಷ್ಠಿಕಾಂಶ ಒದಗಿಸುವ ಆಹಾರವನ್ನು ನೀಡುವ ಯೋಜನೆಯನ್ನು ಆರೋಗ್ಯ ಇಲಾಖೆ ಇಸ್ಕಾನ್ ಸಂಸ್ಥೆಯ ಸಹಭಾಗಿತ್ವದೊಂದಿಗೆ ಜಾರಿಗೆ ತಂದಿದೆ.

ಮೂರು ಆಸ್ಪತ್ರೆಗಳಲ್ಲಿ ಪ್ರಾಯೋಗಿಕವಾಗಿ ಪೌಷ್ಟಿಕ ಆಹಾರ ವಿತರಣೆ ಮಾಡುತ್ತಿದ್ದೇವೆ. ಇದನ್ನು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಸ್ತರಣೆ ಮಾಡೋ ಬಗ್ಗೆ ಚಿಂತನೆ ಆಗ್ತಿದೆ. ಐದು ಥರದ ಪೌಷ್ಟಿಕ ಆಹಾರ ವಿತರಣೆ ಮಾಡ್ತಾ ಇದ್ದೇವೆ.

ಬಾಣಂತಿಯರಿಗೆ ಒಂದು ಆಹಾರ ಕ್ರಮ, ಥೆರಪಿಸ್ಟ್ ಗಳಿಗೆ ಒಂದು ಮಾದರಿಯ ಆಹಾರ ಕ್ರಮ, ಮಕ್ಕಳಿಗೆ ಒಂದು ರೀತಿಯ ಆಹಾರ ಕ್ರಮ ಜಾರಿ ಆಗ್ತಿದೆ. ಈ ಯೋಜನೆಯ ಮೂಲಕ ರೋಗಿಗಳ ನಿರ್ದಿಷ್ಟ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುವ ಆಹಾರವನ್ನ ಒದಗಿಸಲಾಗುವುದು.ರೋಗಿಗಳ ಆರೋಗ್ಯ ಸ್ಥಿತಿ ಮತ್ತು ವಯಸ್ಸಿಗೆ ಅನುಗುಣವಾಗಿ ಪೌಷ್ಟಿಕಾಂಶದ ಅಗತ್ಯಗಳು ಭಿನ್ನವಾಗಿರುವುದರಿಂದ, ಎಲ್ಲರಿಗೂ ಒಂದೇ ರೀತಿಯ ಆಹಾರ ಸೂಕ್ತವಲ್ಲ.ಆಹಾರ ಪದ್ಧತಿಯನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗಿದ್ದು, ರೋಗಿಗಳ ವೈದ್ಯಕೀಯ ಅಗತ್ಯಗಳ ಆಧಾರದ ಮೇಲೆ ಆಹಾರವನ್ನು ವಿಂಗಡಿಸಲಾಗಿದೆ ಎಂದರು.

ಈ ಆಹಾರ ವಿತರಣೆಯ ಸಂಪೂರ್ಣ ಜವಾಬ್ದಾರಿಯನ್ನು ಇಸ್ಕಾನ್ ಸಂಸ್ಥೆಯವರೇ ವಹಿಸಿಕೊಂಡಿದ್ದಾರೆ. ಆಹಾರ ತಯಾರಿ, ಆಸ್ಪತ್ರೆಗೆ ಸಾಗಣೆ, ರೋಗಿಗಳಿಗೆ ಬಡಿಸುವವರೆಗೂ ಅವರ ಸಿಬ್ಬಂದಿಯನ್ನೆ ನೇಮಿಸಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಆಯುಕ್ತರು, ಇಸ್ಕಾನ್ ಸಂಸ್ಥೆಯ ಪದಾಧಿಕಾರಿಗಳು, ಅಧಿಕಾರಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

