ಕಾಪು : ಆಸ್ಪತ್ರೆಯಿಂದ ಕಾನೂನುಬಾಹಿರವಾಗಿ ಮಗು ಮಾರಾಟ ಮಾಡಿದ್ದ ಜಾಲವೊಂದು ಪತ್ತೆಯಾಗಿದ್ದು, ಆಸ್ಪತ್ರೆಯ ವೈದ್ಯ ಸೇರಿ ಮೂವರನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ದುರ್ಗಾವಾಹಿನಿಯ ಮುಖಂಡೆ ವಿಜಯಲಕ್ಷ್ಮಿ ಯಾನೆ ವಿಜಯ, ಡಾ.ಸೋಮೇಶ್ ಸೊಲೋಮನ್, ನವನೀತ್ ನಾರಾಯಣ್ ಎಂದು ಗುರುತಿಸಲಾಗಿದೆ.ಪೋಲಿಸರು ವಿಚಾರಣೆ ನಡೆಸಿದಾಗ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು ಸದ್ಯ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಉಡುಪಿಯ ಕಾಪು ತಾಲ್ಲೂಕಿನ ಹೇರೂರು ಗ್ರಾಮದ ಕಲ್ಲುಗುಡ್ಡೆಯ ನಿವಾಸಿ ಪ್ರಭಾವತಿ – ರಮೇಶ್ ಮೂಲ್ಯ ದಂಪತಿಗಳು 4 ದಿನದ ಮಗುವನ್ನು ಪೋಷನ್ ಟ್ರ್ಯಾಕರ್ ಮಾಡಲು ಅಂಗನವಾಡಿಗೆ ಕರೆದುಕೊಂಡು ಬಂದಿದ್ದರು. ಶಿಶು ದಂಪತಿಯದ್ದಲ್ಲ ಎಂಬ ಶಂಕೆ ಅಂಗನವಾಡಿ ಕಾರ್ಯಕರ್ತೆಗೆ ಬಂದಿದೆ. ವಿಚಾರಿಸಿದಾಗ ಮಂಗಳೂರಿನಲ್ಲಿ ಶಿಶು ಖರೀದಿಸಿದ್ದಾಗಿ ತಿಳಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ (ಸಿಡಿಪಿಒ) ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಅವರು ಆಗಸ್ಟ್ 21 ರಂದು ಶಿರ್ವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಕ್ಕಳಾಗದ ಪ್ರಭಾವತಿ ಮತ್ತು ಅವರ ಪತಿ ರಮೇಶ್ ಮೂಲ್ಯ ಅವರು ಆಗಸ್ಟ್ 3 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಅವಿವಾಹಿತ ಮಹಿಳೆಗೆ ಜನಿಸಿದ ಹೆಣ್ಣು ಮಗುವನ್ನು 4.5 ಲಕ್ಷ ಹಣ ನೀಡಿ ಪಡೆದುಕೊಂಡಿದ್ದರು. ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ ತನಿಖೆಗಿಳಿದ ಪೊಲೀಸರಿಗೆ ಮಗು ಮಾರಾಟ ಜಾಲ ಪತ್ತೆಯಾಗಿದೆ. ಬಳಿಕ ಮಧ್ಯವರ್ತಿ ಮಹಿಳೆಯ ಮೂಲಕ 4.5 ಲಕ್ಷ ರೂ. ಗೆ ಪಾವತಿಸಿದ್ದಾರೆ ಎನ್ನಲಾಗಿದೆ.

