ನೋಯ್ಡಾ: ಆತ್ಮಹತ್ಯಾ ಬಾಂಬರ್ಗಳನ್ನು ಬಳಸಿಕೊಂಡು ಮುಂಬೈನಲ್ಲಿ ಭಯೋತ್ಪಾದಕ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಅಶ್ವಿನಿ ಅವರನ್ನು ನೋಯ್ಡಾದಲ್ಲಿ ಬಂಧಿಸಲಾಗಿದೆ. ಆರೋಪಿ ಕಳೆದ ಐದು ವರ್ಷಗಳಿಂದ ನೋಯ್ಡಾದಲ್ಲಿ ವಾಸಿಸುತ್ತಿದ್ದಾನೆ. ನೋಯ್ಡಾದ ಸೆಕ್ಟರ್ -113 ರಿಂದ ಬಂಧಿಸಲ್ಪಟ್ಟ ಆರೋಪಿಯನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಗುರುವಾರ ಆರೋಪಿ ಮುಂಬೈ ಪೊಲೀಸರ ಅಧಿಕೃತ ವಾಟ್ಸಾಪ್ ಸಂಖ್ಯೆಗೆ ಬೆದರಿಕೆ ಸಂದೇಶ ಕಳುಹಿಸಿದ್ದರು. ನಗರದ ವಿವಿಧ ಸ್ಥಳಗಳಲ್ಲಿ ವಾಹನಗಳಲ್ಲಿ ಬಾಂಬ್ಗಳನ್ನು ಇಡಲಾಗಿದ್ದು, 400 ಕೆಜಿ ಆರ್ಡಿಎಕ್ಸ್ ಬಳಸಿ ಬೃಹತ್ ದಾಳಿ ನಡೆಸಿ ಒಂದು ಕೋಟಿ ಜನರನ್ನು ಕೊಲ್ಲಲಾಗುವುದು ಎಂದು ಸಂದೇಶದಲ್ಲಿ ಎಚ್ಚರಿಸಲಾಗಿತ್ತು.ಬೆದರಿಕೆ ಕರೆ ಮಾಡಿದ ವ್ಯಕ್ತಿ ಪಾಕಿಸ್ತಾನ ಮೂಲದ ಜಿಹಾದಿ ಗುಂಪಿನ ಸದಸ್ಯ ಎಂದು ಹೇಳಿಕೊಂಡಿದ್ದಲ್ಲದೆ, 14 ಪಾಕಿಸ್ತಾನಿ ಭಯೋತ್ಪಾದಕರು ನಗರಕ್ಕೆ ಪ್ರವೇಶಿಸಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದ.

ಘಟನೆಯ ತನಿಖೆ ಆರಂಭಿಸಿರುವ ಪೊಲೀಸರು, ಬಂಧಿತ ಅಶ್ವಿನಿಯಿಂದ ಮೊಬೈಲ್ ಫೋನನ್ನು ವಶಪಡಿಸಿ ಕೊಂಡಿದ್ದಾರೆ. ಆತ ಆರಂಭದಲ್ಲಿ ಜ್ಯೋತಿಷಿ ಎಂದು ಹೇಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈ ನಗರದಾದ್ಯಂತ 34 ವಾಹನಗಳಲ್ಲಿ 34 ‘ಮಾನವ ಬಾಂಬ್’ಗಳನ್ನು ಇರಿಸಲಾಗಿದೆ ಮತ್ತು ಸ್ಫೋಟಗಳು ಇಡೀ ನಗರವನ್ನು ನಡುಗಿಸುತ್ತದೆ ಎಂದು ಬೆದರಿಕೆ ಪತ್ರದಲ್ಲಿ ಹೇಳಲಾಗಿದೆ. ಲಷ್ಕರ್-ಎ-ಜಿಹಾದಿ ಎಂದು ಹೇಳಿಕೊಳ್ಳುವ ಸಂಘಟನೆಯು 14 ಪಾಕಿಸ್ತಾನಿ ಭಯೋತ್ಪಾದಕರು ಭಾರತವನ್ನು ಪ್ರವೇಶಿಸಿದ್ದಾರೆ ಎಂದು ಹೇಳಿದೆ. ಸ್ಫೋಟಕ್ಕೆ 400 ಕೆಜಿ ಆರ್ಡಿಎಕ್ಸ್ ಬಳಸಲಾಗುವುದು ಎಂದು ಬೆದರಿಕೆ ಸಂದೇಶದಲ್ಲಿ ಹೇಳಲಾಗಿದೆ” ಎಂದು ಪೊಲೀಸರಿಗೆ ಬಂದಿರುವ ಬೆದರಿಕೆ ಪತ್ರದಲ್ಲಿ ತಿಳಿಸಲಾಗಿದೆ.
ಇದರ ಬೆನ್ನಲ್ಲೇ ಮುಂಬೈನಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ. ಮುಂಬೈನಲ್ಲಿ ಗಣೇಶ ಚತುರ್ಥಿ ಆಚರಣೆಯ ಸಂದರ್ಭದಲ್ಲಿ ಈ ಬೆದರಿಕೆ ಬಂದಿತ್ತು.

