ತಿರುವನಂತಪುರಂ: ಈ ವರ್ಷ ಕೇರಳದಲ್ಲಿ ಓಣಂ ಹಬ್ಬದ ಪ್ರಯುಕ್ತ ಕೇರಳ ರಾಜ್ಯ ಪಾನೀಯ ನಿಗಮ (BEVCO) ಸಾರ್ವಕಾಲಿಕ ಗರಿಷ್ಠ ಮದ್ಯ ಮಾರಾಟವನ್ನು ದಾಖಲಿಸಿದೆ. ಓಣಂ ಋತುವಿನ 10 ದಿನಗಳಲ್ಲಿ ಅಂಗಡಿಗಳು ಮತ್ತು ಹೊಲ್ಸೇಲ್ ಮೂಲಕ ಒಟ್ಟು ₹826 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ಇದು ಕಳೆದ ವರ್ಷಕ್ಕಿಂತ ₹50 ಕೋಟಿ ಹೆಚ್ಚಾಗಿದೆ. ಕಳೆದ ಓಣಂ ಸಮಯದಲ್ಲಿ ಮದ್ಯ ಮಾರಾಟ ₹776 ಕೋಟಿಗೆ ತಲುಪಿತ್ತು.

ಓಣಂ ಹಬ್ಬದ ಹಿಂದಿನ ದಿನವೇ (ಉತ್ರಾಡಂ) ಆ ದಿನದಂದು ಕೇರಳದಲ್ಲಿ ₹137 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದ್ದು, ಕಳೆದ ವರ್ಷಕ್ಕೆ ಶೇ.9.21 ರಷ್ಟು ಹೆಚ್ಚಳವಾಗಿದೆ. ಹಿಂದಿನ ವರ್ಷದ ಉತ್ರಾಡಂ ದಿನದಂದು ಮಾರಾಟ 126ಕೋಟಿಗಳಷ್ಟಿತ್ತು.

ಉತ್ರಾಡಂ ದಿನದಂದು ಆರು ಮಳಿಗೆಗಳು ಒಂದು ಕೋಟಿಗೂ ಹೆಚ್ಚು ಆದಾಯ ಗಳಿಸಿದವು. ಇವುಗಳಲ್ಲಿ ಮೂರು ಮಳಿಗೆಗಳು ಕೊಲ್ಲಂ ಜಿಲ್ಲೆಯಲ್ಲಿವೆ. ಕೊಲ್ಲಂ ಗೋದಾಮಿನ ಅಡಿಯಲ್ಲಿರುವ ಕರುಣಗಪ್ಪಲ್ಲಿ ಔಟ್ಲೆಟ್ ನಲ್ಲಿ ಅತಿ ಹೆಚ್ಚು ಮಾರಾಟವಾಗಿದೆ. 1ಕೋಟಿ 46 ಲಕ್ಷ ಮೌಲ್ಯದ ಮದ್ಯ ಮಾರಾಟವಾಗಿದೆ. ಕೊಲ್ಲಂ ಗೋದಾಮಿನ ಅಡಿಯಲ್ಲಿರುವ ಕವನಾಡ್ ಔಟ್ಲೆಟ್ 1ಕೋಟಿ 24 ಲಕ್ಷ ಮೌಲ್ಯದ ಮದ್ಯ ಮಾರಾಟವಾಗಿದೆ, ಪೆರಿಂಥಲ್ಮನ್ನಾ ಗೋದಾಮಿನ ಅಡಿಯಲ್ಲಿರುವ ಎಡಪ್ಪಲ್ ಕುಟ್ಟಿಪಾಲ ಔಟ್ಲೆಟ್ 1 ಕೋಟಿ 11 ಲಕ್ಷ, ಚಲಕುಡಿ ಔಟ್ಲೆಟ್ 1 ಕೋಟಿ 7 ಲಕ್ಷ, ಇರಿಂಜಲಕುಡ ಔಟ್ಲೆಟ್ 1 ಕೋಟಿ 3 ಲಕ್ಷ ಮತ್ತು ಕುಂದರದಲ್ಲಿ ಒಂದು ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ.

ಈ ವರ್ಷ ಹಬ್ಬದ ಋತುವಿನಲ್ಲಿ ಒಟ್ಟಾರೆ ಮದ್ಯ ಮಾರಾಟ ಹೆಚ್ಚಾಗಿದೆ. ಏಪ್ರಿಲ್ 1 ರಿಂದ ಸೆಪ್ಟೆಂಬರ್ 4, 2025 ರವರೆಗೆ, ಬೆವ್ಕೊ 8,962.97 ಕೋಟಿ ರೂ.ಗಳ ಮಾರಾಟವನ್ನು ವರದಿ ಮಾಡಿದೆ, ಕಳೆದ ವರ್ಷ ಇದೇ ಅವಧಿಯಲ್ಲಿ ಇದು ₹8,267.74 ಕೋಟಿಗಳಷ್ಟಿತ್ತು. ಅದು ₹698.23 ಕೋಟಿ ಅಥವಾ ಶೇ. 8.45 ರಷ್ಟು ಹೆಚ್ಚಳವಾಗಿದೆ.

