ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆ.29 ರಂದು ಕರೆಮಾಡಿ ಟರ್ಮಿನಲ್ ಕಟ್ಟಡ ಧ್ವಂಸಗೊಳಿಸುವುದಾಗಿ ಬೆದರಿಕೆ ಕರೆ ಮಾಡಿದ ವ್ಯಕ್ತಿಯನ್ನು ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವೆಲ್ಲೂರು ನಿವಾಸಿ ಎಂ.ಡಿ. ಸಂಪತ್ ಎಂಬವರ ಪುತ್ರ ಶಶಿಕುಮಾರ್ (38) ಬಂಧಿತ ಆರೋಪಿ.29ರಂದು ರಾತ್ರಿ ಕರೆ ಮಾಡಿ ಟರ್ಮಿನಲ್ ಕಟ್ಟಡ ತಕ್ಷಣ ಖಾಲಿ ಮಾಡಬೇಕು, ತಪ್ಪಿದಲ್ಲಿ ಅದನ್ನು ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಬಗ್ಗೆ ಡ್ಯೂಟಿ ಟರ್ಮಿನಲ್ ಮ್ಯಾನೇಜರ್ ಬಜಪೆ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಆರೋಪಿ ವೆಲ್ಲೂರು ಜಿಲ್ಲೆಯಲ್ಲಿರುವ ಖಚಿತ ಮಾಹಿತಿ ಪಡೆದ ಪೊಲೀಸರು ಇದೀಗ ಆತನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅಲ್ಲದೆ ಈತ ದೇಶದ ವಿವಿಧ ವಿಮಾನ ನಿಲ್ದಾಣಗಳ ದೂರವಾಣಿ ಸಂಖ್ಯೆಗಳನ್ನು ಸಾಮಾಜಿಕ ಜಾಲತಾಣಗಳಿಂದ ಸಂಗ್ರಹಿಸಿ ಈ ರೀತಿ ಬೆದರಿಕೆ ಕರೆಗಳನ್ನು ಮಾಡಿರುವುದಾಗಿ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾನೆ.

