ಮಂಗಳೂರು : ನಮ್ಮ ಕನಸು ಬ್ಯಾನರಿನಲ್ಲಿ ತಯಾರಾದ ಕೆ. ಸುರೇಶ್ ಅವರು ನಿರ್ಮಾಣದ, ರಮೇಶ್ ಶೆಟ್ಟಿಗಾರ್ ಕಥೆ ಬರೆದು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರಾದ ಸಂತೋಷ್ ಮಾಡ ನಿರ್ದೇಶನದಲ್ಲಿ ಮೂಡಿ ಬಂದ ತುಳು ಸಿನಿಮಾ ಪಿದಾಯಿ ಸೆಪ್ಟೆಂಬರ್ 12 ರಂದು ಕರಾವಳಿಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಟಿ ರೂಪಾ ವರ್ಕಾಡಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪಿದಾಯಿ ಚಿತ್ರವು ಕೊಲ್ಕತ್ತ, ಸಿಮ್ಲಾ ಜಾರ್ಖಂಡ್ ಹಾಗೂ ಕ್ಯಾಲಿಫೋರ್ನಿಯಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಧಿಕೃತ ಆಯ್ಕೆಯಾಗುವುದರ ಜೊತೆಗೆ 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮಬಾರಿಗೆ ತುಳು ಚಿತ್ರವೊಂದು ಭಾರತೀಯ ಚಲನಚಿತ್ರ ಹಾಗೂ ಕನ್ನಡ ಚಲನಚಿತ್ರ ಹೀಗೆ ಎರಡೂ ವಿಭಾಗಗಳಲ್ಲಿ ಸ್ವರ್ಧೆಯಲ್ಲಿದ್ದು ಅಂತಿಮವಾಗಿ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ ಎಂದರು

ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕನ್ನಡದ ಖ್ಯಾತ ನಟರಾದ ಶರತ್ ಲೋಹಿತಾಶ್ವರವರು ಅಭಿನಯಿಸಿದ್ದಾರೆ. ಇವರ ಜೊತೆಗೆ ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೋಳ್ಳಾರ್, ರೂಪಶ್ರೀ ವರ್ಕಾಡಿ, ಇಳಾ ವಿಟ್ಲ, ದೇವಿ ನಾಯರ್, ಪ್ರೀತೇಶ್ ಕುಮಾರ್, ಅನಿಲ್ ರಾಜ್ ಉಪ್ಪಳ, ರವಿ ವರ್ಕಾಡಿ, ಡಿಬಿಸಿ ಶೇಖರ್, ಅನಿತಾ ಚಂದ್ರಶೇಖರ್ ಹಾಗೂ ಬಾಲ ಪ್ರತಿಭೆಗಳಾದ ಮೋನಿಶ್, ತಿಷ, ಧ್ರುವ, ನಿಹಾ, ಕುಶಿ ಶೇಖರ್ ಮುಂತಾದವರು ಅಭಿನಯಿಸಿದ್ದಾರೆ.

ರಾಷ್ಟ್ರ ಪ್ರಶಸ್ತಿ ವಿಜೇತ ಜೀಟಿಗೆ ಚಿತ್ರ ಛಾಯಾಗ್ರಾಹಕರಾದ ಉಣ್ಣಿ ಮಾಡವೂರ್ರವರು ಈ ಸಿನಿಮಾದ ಛಾಯಾಗ್ರಹಣೆಯನ್ನು ನಿಭಾಯಿಸಿದ್ದಾರೆ. ಎರಡು ಸಲ ರಾಷ್ಟ್ರ ಪ್ರಶಸ್ತಿ ವಿಜೇತರಾಗಿ ವಿಶ್ವದಲ್ಲೇ ಅತೀಹೆಚ್ಚು ಸಿನಿಮಾ ಸಂಕಲನ ಮಾಡಿ ಧಾಖಲೆ ಮಾಡಿರುವ ಸುರೇಶ್ ಅರಸ್ ಇವರು ಈ ಚಿತ್ರಕ್ಕೆ ಸಂಕಲನಕಾರರಾಗಿದ್ದಾರೆ. ಸಂಭಾಷಣೆಯನ್ನು ರಮೇಶ್ ಶೆಟ್ಟಿಗಾರ್ ಹಾಗೂ ಡಿ.ಬಿ.ಸಿ. ಶೇಖರ್ ಜೊತೆಗೋಡಿ ಬರೆದಿದ್ದಾರೆ.

ಚಿತ್ರವನ್ನು ದ.ಕ ಜಿಲ್ಲೆಯ ಮುಡಿಪು ಹಾಗೂ ಮಂಜೇಶ್ವರದ
ಗಡಿಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ.ಮಲಯಾಳಂ ಚಿತ್ರ ರಂಗದ ಪ್ರಸಿದ್ದ ಕವಿ 5 ಸಲ ಕೇರಳ ಸರಕಾರದ ಪ್ರಶಸ್ತಿ ವಿಜೇತ ಪದ್ಮಶ್ರೀ ಕೃತವಮ್ ದಾಮೋದರನ್ ನಂಬೂದಿರಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಾದ ಸುಧೀರ್ ಅತ್ತಾವರ, ತುಳು ಅಕಾಡೆಮಿ ಪ್ರಶಸ್ತಿ ವಿಜೇತರಾದ ಕುಶಾಲಾಕ್ಷಿ ಕಣ್ವತೀರ್ಥರವರ ಸಾಹಿತ್ಯವಿದ್ದು ಅಜಯ್ ನಂಬೂದಿರಿಯವರು ಸಂಗೀತ ನೀಡಿದ್ದಾರೆ.

ಸಂಗೀತ ವಿದ್ಯಾನಿಧಿ ಡಾಕ್ಟರ್ ವಿದ್ಯಾಭೂಷಣ್ ರವರು ಪ್ರಪಥಮವಾಗಿ ಈ ಸಿನಿಮಾದಲ್ಲಿ ಹಾಡಿದ್ದಾರೆ ಎಂಬುದು ಇನ್ನೊಂದು ವಿಶೇಷತೆ. ಜೊತೆಗೆ ಹಿನ್ನಲೆ ಗಾಯಕರಾದ ಮೇಧ ವಿದ್ಯಾಭೂಷಣ್, ವಿಜೇಶ್ ಗೋಪಾಲ್, ಭಾವನಾ ಮುಂತಾದವರು ಕಂಠದಾನ ಮಾಡಿದ್ದಾರೆ. ಹಿನ್ನಲೆ ಸಂಗೀತವನ್ನು ಕೇರಳ ರಾಜ್ಯ ಪ್ರಶಸ್ತಿ ವಿಜೇತ ಸಂಗೀತಕಾರರಾದ ದೀಪಾಂಕುರನ್ ರವರು ಈ ಸಿನೆಮಾಕ್ಕಾಗಿ ವಿಶೇಷ ಹಿನ್ನೆಲೆಯ ಸಂಗೀತವನ್ನು ನೀಡಿದ್ದಾರೆ. ಚಿತ್ರದ ಕಲಾನಿರ್ದೇಶಕರಾಗಿ ರಾಜೇಶ್ ಬಂದ್ಯೋಡ್,ವಸ್ತ್ರವಿನ್ಯಾಸಕಾರರಾಗಿ ಮೀರಾಸಂತೋಷ್,

ಮೇಕಪ್ ಮ್ಯಾನ್ ಆಗಿ ಬಿನೋಯ್ ಕೊಲ್ಲಮ್, ಮುಖ್ಯ ಸಹನಿರ್ದೇಶಕರಾಗಿ ವಿಘ್ನೇಶ್ ಕುಲಾಲ್, ಸಹ ನಿರ್ದೇಶಕರಾಗಿ ಗಿರೀಶ್ ಆಚಾರ್ ಸುಳ್ಯ, ಪ್ರದೀಪ್ ರಾವ್, ವಿಶ್ವ ಮಂಗಲ್ಪಾಡಿ, ತಂಡದ ಮ್ಯಾನೇಜರ್ ಆಗಿ ರವಿ ವರ್ಕಾಡಿ ಹಾಗೂ ಸ್ಥಿರ ಛಾಯಾಗ್ರಾಹಕರಾಗಿ ದೀಪಕ್ ಉಪ್ಪಳ ನಿರ್ವಹಿಸಿದ್ದಾರೆ.
ತುಳುನಾಡಿನ ವಿಶೇಷತೆಯಾದ ಕುಣಿತ ಭಜನೆಯನ್ನು ಮೊದಲ ಬಾರಿಗೆ ಈ ಸಿನಿಮಾದಲ್ಲಿ ಪ್ರಯೋಗಿಸಲಾಗಿದೆ. ಸಂದೀಪ್ ಬಲ್ಲಾಳ್ ಸಂಗೀತ ನೀಡಿದ ಕುಣಿತ ಭಜನೆಗೆ ಸಾಹಿತ್ಯ ಬರೆದವರು ಯೋಗೀಶ್ ಎ. ಯಸ್,ಶಶಿರಾಜ್ ಕಾವೂರವರು ಬರೆದ ಹಾಡಿಗೆ ಶಿನೋಯ್ ಜೋಸೆಫ್ ಸಂಗೀತ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಸಂತೋಷ್ ಮಾಡ,ಪುಷ್ಪರಾಜ್ ಬೊಳ್ಳಾರ್ , ಡಿ.ಬಿ.ಸಿ ಚಂದ್ರಶೇಖರ್, ಮೀನಾಕ್ಷಿ ರಾಮಚಂದ್ರ, ಕುಮಾರಿ ಖುಷಿ ಉಪಸ್ಥಿತರಿದ್ದರು.

