ಮಂಗಳೂರು : ಪಿಲಿನಲಿಕೆ ಪ್ರತಿಷ್ಠಾನ(ರಿ.) ಮಂಗಳೂರು ಹಾಗೂ ನಮ್ಮ ಟಿವಿಯ ಸಹಯೋಗದಲ್ಲಿ “ಪಿಲಿನಲಿಕೆ-10” ಮಂಗಳೂರಿನ ಮಂಗಳಾ ಕ್ರೀಡಾಂಗಣದ ಬಳಿಯ ಕರಾವಳಿ ಉತ್ಸವ ಮೈದಾನದಲ್ಲಿ ಅಕ್ಟೋಬರ್ 1ರಂದು ಬುಧವಾರ ಬೆಳಿಗ್ಗೆ 10.00 ಗಂಟೆಯಿಂದ ನಡೆಯಲಿರುವುದು ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಮಿಥುನ್ ರೈ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ತುಳುನಾಡಿನ ಅದ್ಭುತ ಕಲಾ ಪರಂಪರೆ ಮತ್ತು ಇಂದು ಇಡೀ ವಿಶ್ವದ ಗಮನವನ್ನು ಸೆಳೆದಿರುವ ಹುಲಿವೇಷ ಕುಣಿತದ ಮೂಲ ಸ್ವರೂಪವನ್ನು ಉಳಿಸುತ್ತಾ ಅದನ್ನು ಬೆಳೆಸುವ ನಿಟ್ಟಿನಲ್ಲಿ ಆರಂಭಿಸಿದ ಪಿಲಿನಲಿಕೆ ಸ್ಪರ್ಧೆ ಯಶಸ್ವಿಯಾಗಿ 9 ಆವೃತ್ತಿಗಳನ್ನು ಪೂರೈಸಿದೆ. ಇದೀಗ ಪಿಲಿನಲಿಕೆ-10 ಸ್ಪರ್ಧಾಕಣದಲ್ಲಿ ತುಳುನಾಡಿನ ಪ್ರತಿಷ್ಠಿತ ಮತ್ತು ಆಹ್ವಾನಿತ 10 ತಂಡಗಳು ಭಾಗವಹಿಸಲಿದೆ ಎಂದರು.

ಸ್ಪರ್ಧೆಯಲ್ಲಿ ಒಟ್ಟು 26 ಲಕ್ಷ ರೂ ನಿಗದಿ ಪಡಿಸಲಾಗಿದೆ. ಬಹುಮಾನ ರೂಪದಲ್ಲಿ ಪ್ರಥಮ ರೂ.10,00,000/- ಮತ್ತು ಫಲಕ, ದ್ವಿತೀಯ ರೂ.5,00,000/- ಮತ್ತು ಫಲಕ, ತೃತೀಯ ರೂ.3,00,000/- ಮತ್ತು ಫಲಕ ಹಾಗೂ ವಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ಮರಿಹುಲಿ, ಕರಿಹುಲಿ, ಮುಡಿ ಹಾರಿಸುವುದು, ತಾಸೆ, ಬಣ್ಣಗಾರಿಕೆ, ಅತ್ಯುತ್ತಮ ಹುಲಿ ಕುಣಿತಕ್ಕೆ ತಲಾ ರೂ. 50,000/- ನಗದು ಬಹುಮಾನಗಳನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ತಂಡಕ್ಕೂ ರೂ.50,000/- ವನ್ನು ಪ್ರೋತ್ಸಾಹಕ ರೂಪದಲ್ಲಿ ನೀಡಲಾಗುವುದು.

ಕಾರ್ಯಕ್ರಮದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಡಿ.ಕೆ.ಶಿವಕುಮಾರ್, ರಾಜ್ಯಸಭಾ ಸದಸ್ಯ ನಸೀರ್ ಹುಸೇನ್,ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಪಾಲ್ಗೊಳ್ಳಲಿದ್ದಾರೆ. ಸಹಕಾರ ರತ್ನ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಿದ್ದೇವೆ. ಅಲ್ಲದೆ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಬಾಲಿವುಡ್ ನಟರಾದ ಸುನೀಲ್ ಶೆಟ್ಟಿ, ಜಾಕಿಶ್ರಾಫ್,ಸ್ಯಾಂಡಲ್ ವುಡ್ ನಟರಾದ ರಿಷಬ್ ಶೆಟ್ಟಿ, ರಾಜ್ ಬಿ.ಶೆಟ್ಟಿ, ಗುರುಕಿರಣ್ ಸೇರಿದಂತೆ ಸಿನೆಮಾ ಕ್ಷೇತ್ರದ ಹಾಗೂ ಕ್ರೀಡಾ ಕ್ಷೇತ್ರದ ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ. ದಶಮಾನೋತ್ಸವದ ಅಂಗವಾಗಿ ಪಿಲಿನಲಿಕೆ ಪ್ರತಿಷ್ಠಾನದ ವತಿಯಿಂದ ಮೂಡಬಿದಿರೆ ತಾಲೂಕಿನ ಒಂದು ಸರಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಅದರ ಅಭಿವೃದ್ಧಿಗೆ ಶ್ರಮಿಸಲು ನಿರ್ಧರಿಸಲಾಗಿದೆ ಎಂದು ಮಿಥುನ್ ರೈ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ.ಶಿವಶರಣ್ ಶೆಟ್ಟಿ,ನವೀನ್ ಶೆಟ್ಟಿ, ಅವಿನಾಶ್,ವಿಕಾಸ್ ಶೆಟ್ಟಿ,ಆನಂದರಾಜ್ ಉಪಸ್ಥಿತರಿದ್ದರು.
ಚಿತ್ರ : ಸತೀಶ್ ಕಾಪಿಕಾಡ್

