ಮಂಗಳೂರು :1969 ರಂದು ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ದೇವಾಲಯದ ಪರಿಸರದಲ್ಲಿ ಪ್ರಾರಂಭಗೊಂಡ ಶ್ರೀ ಕೃಷ್ಣ ಜನ್ಮ ಮಹೋತ್ಸವ ಸಮಿತಿ. ಈ ವರ್ಷ 56 ನೇ ವರ್ಷಾಚರಣೆಯನ್ನು ಆಚರಿಸುತ್ತಿದೆ. ಈ ಬಾರಿ ಕದ್ರಿ ಶ್ರೀ ಕೃಷ್ಣ ಜನ್ಮ ಮಹೋತ್ಸವ ಸಮಿತಿಯ ವತಿಯಿಂದ ಸೆ.15ರಂದು ಶ್ರೀ ಕ್ಷೇತ್ರ ಕದ್ರಿಯಲ್ಲಿ ಶ್ರೀಕೃಷ್ಣಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಗೋಕುಲ್ ಕದ್ರಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನಂತರ ಸಮಿತಿಯ ಉಪಾಧ್ಯಕ್ಷರಾದ ಸುಧಾಕರ್ ರಾವ್ ಪೇಜಾವರ ಮಾತನಾಡಿ ಸಂಜೆ 4ರಿಂದ ಕ್ಷೇತ್ರದ ರಾಜಾಂಗಣದ ನಂದಗೋಕುಲ’ ವೇದಿಕೆಯಲ್ಲಿ ಮೊಸರು ಕುಡಿಕೆ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಉಡುಪಿ ಶ್ರೀ ಕ್ಷೇತ್ರ ಶಂಕರಪುರದ ಶ್ರೀ ಸಾಯಿ ಈಶ್ವರ ಗುರೂಜಿ ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕದ್ರಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ| ಎ.ಜೆ ಶೆಟ್ಟಿಯವರು ವಹಿಸಲಿದ್ದಾರೆ.

ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಕೋಡಿಕಲ್ ಸರಯೂ ಬಾಲಯಕ್ಷವೃಂದದಿಂದ ‘ಶ್ರೀಕೃಷ್ಣ ಪಾರಮ್ಯ’ ಯಕ್ಷಗಾನ ಬಯಲಾಟ, ಸಂಜೆ 4ರಿಂದ ರಾತ್ರಿ 7ರವರೆಗೆ ಸಾನ್ನಿಧ್ಯ ವಿಶೇಷ ಚೇತನ ಶಾಲಾ ಮಕ್ಕಳಿಂದ ‘ಶ್ರೀ ಕೃಷ್ಣ ಜನ್ಮ ಹಾಗೂ ಕಂಸವಧೆ ಯಕ್ಷಗಾನ ಬಯಲಾಟ, ಕಲ್ಲುರ್ಟಿ-ಕಲ್ಕುಡ ನಾಟಕ ಪ್ರದರ್ಶನ ನಡೆಯಲಿದೆ. ರಾತ್ರಿ 7 ರಿಂದ ಕದ್ರಿ ಹವ್ಯಾಸಿ ಬಳಗದವರಿಂದ ‘ವೀರವರ್ಮ ಕಾಳಗ’ ಯಕ್ಷಗಾನ ಬಯಲಾಟ ನಡೆಯಲಿದೆ.ಸಂಜೆ 6 ರಿಂದ ಗೋಪಾಲಕೃಷ್ಣ ಮಂದಿರದಿಂದ ಶೋಭಾಯಾತ್ರೆ ಪ್ರಾರಂಭವಾಗಲಿದೆ.ಪ್ರತಿ ವರ್ಷದಂತೆ ಅಡಿಕೆ ಮರವೇರಿ ನಿಧಿ ಪಡೆಯುವ ಸ್ಪರ್ಧೆ ಕೂಡ ನಡೆಯಲಿದೆ. ಗೋಪಾಲಕೃಷ್ಣ ಮಂದಿರದಿಂದ ಕದ್ರಿ ಕ್ಷೇತ್ರದವರೆಗೆ ಸುಮಾರು 3 ಕಿಮೀ ದಾರಿಯುದ್ದಕ್ಕೂ ಸುಮಾರು 3,000 ದಷ್ಟು ಮೊಸರು ಕುಡಿಕೆಗಳನ್ನು ಅಳವಡಿಸಲಾಗುವುದು. ನೋಂದಣಿಯಾದ ತಂಡಗಳಿಗೆ ಮಾತ್ರವೇ ಮೊಸರು ಕುಡಿಕೆ ಒಡೆಯಲು ಅವಕಾಶ ನೀಡಲಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಜೆ. ದೇವಾಡಿಗ,ಕಿರಣ್ ಜೋಗಿ, ಆನಂದ್ ಶೆಣೈ, ಸಂದೀಪ್ ಕದ್ರಿ,ಉಪಸ್ಥಿತರಿದ್ದರು

